
ಇಂದು ಹಿಂದೂಗಳಿಗೆ ಪವಿತ್ರವಾದ ಸ್ವರ್ಗಕ್ಕೆ ಬಾಗಿಲು ತೆರೆಯವ ದಿನ, ಅದನ್ನು ವಿಷ್ಣು ದೇವಸ್ಥಾನಗಳಲ್ಲಿರುವ ವೈಕುಂಠ ದ್ವಾರದ ಮೂಲಕ ಹಾದು ಹೋದರೆ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆಯಿಂದ ಆಚರಿಸುವ ಭಕ್ತಿ ಆಚರಣೆಯ ದಿನ.
ಈ ವೈಕುಂಠ ಏಕಾದಶಿಯ ಮೂಲ ಪದ್ಮ ಪುರಾಣದಲ್ಲಿದೆ. ಬ್ರಹ್ಮನಿಂದ ವರ ಪಡೆದ ಮೂರಾಸೂರಾ ದೇವತೆಗಳಿಗೆ ದುಸ್ವಪ್ನವಾಗಿದ್ದ, ವಿಷ್ಣುವಿಗೆ ಅಸುರನನ್ನು ಮೊದಲು ಸೋಲಿಸಲಾಗಲಿಲ್ಲ. ಬದರಿಕಾಶ್ರಮದ ಸುತ್ತ ಇದ್ದ ಸಿಂಹಾವತಿ ಗುಹೆಗೆ ವಿಷ್ಣು ಹೋದ. ಮೂರಾಸೂರಾ ಅಲ್ಲಿಯೇ ಬಂದ. ವಿಷ್ಣು ತನ್ನ ದೈವಿಕ ಶಕ್ತಿಯಿಂದ “ಯೋಗಮಾಯಾ” ಎಂಬ ದೇವತೆಯನ್ನು ಕರೆದ. ಆಕೆ ಅಸುರನನ್ನು ಕೊಂದಳು. ವಿಷ್ಣು ಆ ದೇವಿಗೆ “ಏಕಾದಶಿ” ಎಂಬ ಹೆಸರು ಕೊಟ್ಟ. ಭೂಮಿಯ ಎಲ್ಲಾ ಜನರ ಪಾಪಗಳನ್ನು ನಾಶ ಮಾಡುವ ಶಕ್ತಿ ಆಕೆ ಹೊಂದಿದ್ದಾಳೆ. ಅದು ಧನುರ್ ಮಾಸ ಶುಕ್ಲಪಕ್ಷ ಏಕಾದಶಿಯಾಗಿತ್ತು. ಇನ್ನೊಂದು ಪ್ರತೀತಿಯ ಪ್ರಕಾರ ಅಯೋಧ್ಯೆಯ ರಾಜನಾಗಿದ್ದ ಅಂಬರೀಶ ಯಾವಾಗಲೂ ಈ ಸಂದರ್ಭದಲ್ಲಿ ಉಪವಾಸ ಮಾಡುತ್ತಿದ್ದ. ಮೂರು ದಿನಗಳ ಉಪವಾಸ ನಂತರ ತನ್ನ ಉಪವಾಸ ಮುರಿಯಲು ಹೋದಾಗ ದೂರ್ವಾಸ ಮುನಿ ಬಂದ. ರಾಜ ಆತನಿಗೆ ಗೌರವದಿಂದ ಆತಿಥ್ಯ ನೀಡಿದ. ಬಹಳ ಹೊತ್ತು ಕಾಯುತ್ತಿದ್ದರೂ ಋಷಿ ಬರಲಿಲ್ಲ. ಆಗ ರಾಜ ಉಪವಾಸ ಮುರಿಯಲು ಸ್ವಲ್ಪ ನೀರು ಕುಡಿದ. ಋಷಿಗೆ ಸಿಟ್ಟು ಬಂದು, ರಾಜನಿಗೆ ಶಿಕ್ಷೆ ಕೊಡಲು ಪ್ರಯತ್ನಿಸಿದ. ವಿಷ್ಣುವಿನ ಸುದರ್ಶನ ಚಕ್ರ ಋಷಿಯನ್ನು ಬೆನ್ನು ಹತ್ತಿತ್ತು. ಋಷಿ, ಬ್ರಹ್ಮ, ಶಿವ ಹಾಗೂ ದೇವತೆಗಳ ಬಳಿ ನೆರವು ಕೇಳಿದ. ಯಾರಿಂದಲೂ ಸಾಧ್ಯವಾಗದಿದ್ದಾಗ ವಿಷ್ಣುವನ್ನೂ ಬೇಡಿಕೊಂಡ. ವಿಷ್ಣು ಹೇಳಿದಂತೆ ಆತನ ಭಕ್ತ ಅಂಬರೀಶನಲ್ಲೇ ಕ್ಷಮೆ ಕೇಳಲು ಹೇಳಿದ. ಇನ್ನೊಂದು ಕಥೆಯ ಪ್ರಕಾರ ಇಬ್ಬರು ಅಸುರರಿಗೆ ವೈಕುಂಠದಲ್ಲಿ ವೈಕುಂಠದ್ವಾರ ತೆರೆದ. ಹೀಗಾಗಿ ಈ ಕಥೆಗಳನ್ನು ಕೇಳುವವರು, ವೈಕುಂಠದ್ವಾರ ಬಾಗಿಲಿನಿಂದ ಹೊರಬಂದು ವಿಷ್ಣುವಿನ ಮೂರ್ತಿ ನೋಡುವವರು ವೈಕುಂಠವನ್ನು ತಲುಪುತ್ತಾರೆ ಎಂಬ ನಂಬಿಕೆ ಇದೆ.
ವಿಷ್ಣು ಪುರಾಣದ ಪ್ರಕಾರ ಈ ವೈಕುಂಠ ಏಕಾದಶಿಯ ಒಂದು ದಿನ ಉಪವಾಸ ಮಾಡುವುದು ಉಳಿದ 23 ಏಕಾದಶಿಗಳ ಉಪವಾಸಕ್ಕೆ ಸಮವಾಗಿರುತ್ತದಂತೆ. ಈ ದಿನ ವಿಷ್ಣುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಧ್ಯಾನದಲ್ಲಿ ತೊಡಗಬೇಕು. ಇಂದು ವಿಷ್ಣುವಿನ ಭಕ್ತರೂ ಅನ್ನ ಸೇವಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಇಂದು ಸಂಪೂರ್ಣ ಉಪವಾಸ ಆಚರಿಸಿ, ದ್ವಾದಶಿ ಎಂದು ಅಂದರೆ ನಾಳೆ ಹಬ್ಬದ ಅಡುಗೆಯನ್ನು ಭಕ್ತರು ಸೇವಿಸುತ್ತಾರೆ.
ಶ್ರೀರಂಗದಲ್ಲಿಯ ಶ್ರೀರಂಗ ರಂಗನಾಥಸ್ವಾಮಿ ದೇವಲಾಯದಲ್ಲಿ ವೈಕುಂಠ ಏಕಾದಶಿ ಆಚರಣೆ 20 ದಿನ ನಡೆಯುತ್ತದೆ. ಫಗಲ್ ಪಾತು ಅಂದರೆ ಬೆಳಗಿನ ಭಾಗ 10 ದಿನಗಳು ಹಾಗೂ ಇರಾ ಪಾತು ಅಂದರೆ ರಾತ್ರಿ ಭಾಗ 10 ದಿನಗಳು.
ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠದ್ವಾರ ಎಂಬ ವಿಶೇಷ ಪ್ರವೇಶ ದ್ವಾರವಿದೆ. ಈ ದಿನದಂದು ಮಾತ್ರ ಆ ದ್ವಾರದ ಮೂಲಕ ಭಕ್ತರೂ ಒಳಗೆ ಹೋಗಬಹುದು.
- ಎನ್.ವ್ಹಿ.ರಮೇಶ್ ,ನಿವೃತ್ತ ಕಾರ್ಯಕ್ರಮ ಅಧಿಕಾರಿ,ಆಕಾಶವಾಣಿ ಮೈಸೂರು
