ಆಶ್ರಯ ಯೋಜನೆಯ ಮನೆಗಳನ್ನು ಹಸ್ತಾಂತರಿಸಲು ದಿನಾಂಕ 28.01.2025 ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವ ಮಾನ್ಯ ವಸತಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಜಮೀರ್ ಅಹ್ಮದ್!!
ಶಿವಮೊಗ್ಗ: ನಗರದ ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ಪ್ರಧಾನ ಮಂತ್ರಿ ಆಶ್ರಯ ಯೋಜನೆ ಅಡಿಯಲ್ಲಿ ಈಗಾಗಲೇ ನಿರ್ಮಾಣಗೊಂಡು ಫಲಾನುಭವಿಗಳಿಗೆ ಹಸ್ತಾಂತರಿಸಲು ಸಿದ್ಧವಾಗಿರುವ 652 ಮನೆಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಮಾನ್ಯ ವಸತಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಜಮೀರ್ ಅಹ್ಮದ್ ಅವರನ್ನು ಕಳೆದ ವಾರ ಭೇಟಿಯಾಗಿ, ಮನೆಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಮನೆಗಳಲ್ಲಿ ಇರುವಂತಹ ನೀರಿನ ಹಾಗೂ ವಿದ್ಯುತ್ ಸಮಸ್ಯೆಗಳ ಕುರಿತು ಶಿವಮೊಗ್ಗ ಶಾಸಕ ಶ್ರೀ ಎಸ್ ಎನ್ ಚನ್ನಬಸ್ಸಪ್ಪ ಅವರು ಸುಧೀರ್ಘ ಚರ್ಚೆ ನಡೆಸಿದರು. ಜನವರಿ 18ರಂದು ಹಸ್ತಾಂತರ ಪ್ರಕ್ರಿಯೆಯನ್ನು ನಡೆಸಲು ಈ ಮೊದಲೇ ನಿಗದಿಪಡಿಸಲಾಗಿತ್ತು. ಆದರೆ ಕೇಂದ್ರ ಸಚಿವರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ಆಗ ಮತ್ತೊಂದು ದಿನ ಶಿವಮೊಗ್ಗ ನಗರಕ್ಕೆ ಖಂಡಿತವಾಗಿ ಆಗಮಿಸುವುದಾಗಿ ಮಾನ್ಯ ಸಚಿವರು ತಿಳಿಸಿದ್ದರೂ, ಆದರೆ ಸತತ ಪರಿಶ್ರಮದ ಫಲವಾಗಿ ದಿನಾಂಕ 28.01.2025ರ ಮಂಗಳವಾರದಂದು ಶಿವಮೊಗ್ಗ ನಗರಕ್ಕೆ ಆಗಮಿಸುವುದಾಗಿ ಇಂದು ಮಾನ್ಯ ಸಚಿವರಾದ ಜಮೀರ್ ಅಹ್ಮದ್ ಅವರು ದೂರವಾಣಿ ಮೂಲಕ ತಿಳಿಸಿದ್ದು, ಅವರ ಉಪಸ್ಥಿತಿಯಲ್ಲಿ ಮನೆಗಳ ಹಸ್ತಾಂತರ ಪ್ರಕ್ರಿಯೆಯು ನಡೆಯಲಿದೆ ಎಂದು ಈ ಮೂಲಕ ತಮಗೆ ಹಾಗು ತಮ್ಮ ಮೂಲಕ ನಗರದ ನಾಗರೀಕರಿಗೆ ತಿಳಿಸಲು ಇಚ್ಚಿಸುತ್ತೇನೆ ಎಂದು ಶಾಸಕ ಶ್ರೀ ಎಸ್ ಎನ್ ಚನ್ನಬಸಪ್ಪ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದು ನಮ್ಮೆಲ್ಲರ ಸತತ ಹೋರಾಟಕ್ಕೆ ಸಿಕ್ಕ ಪ್ರತಿಫಲ!
ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಸಿಕ್ಕ ಜಯ!
ಈ ಸಂದರ್ಭದಲ್ಲಿ ಶಿವಮೊಗ್ಗ ನಗರದ ಸಮಸ್ತ ನಾಗರೀಕರ ಪರವಾಗಿ ಆಶ್ರಯ ಯೋಜನೆಯ ಫಲಾನುಭವಿಗಳ ಸಹನೆಗೆ ಅಭಿನಂದನೆಗಳು ಹಾಗೂ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದು ಅವರು ಪುನರುಚ್ಚರಿಸಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.
