ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊಪ್ಪಳದ ಶ್ರೀ ಗವಿ ಮಠದ ಜಾತ್ರೆ ಕೇವಲ ಯಾತ್ರೆಯಲ್ಲ-ಸಾಮಾಜಿಕ ಜಾಗೃತಿ : ಡಾ.ನರಸಿಂಹಗುಂಜಹಳ್ಳಿ

ಕೊಪ್ಪಳವು ಜೈನರ ಪವಿತ್ರ ಕ್ಷೇತ್ರವಾಗಿತ್ತು, ಇಲ್ಲಿ ಸುಮಾರು ೭೭೭ ಜೈನ ಬಸದಿಗಳು ಇದ್ದವು. ವೈಧಿಕ ಸಂಪ್ರದಾಯದ ದೇವಸ್ಥಾನಗಳು, ಸುಂದರವಾಗಿ ನಿರ್ಮಿಸಿದ ಸೂಫಿ ಸಂತರ ಸಮಾದಿಗಳು ಇವೆ. ಇದರ ಜೊತೆಗೆ ಪುರಂದರ ದಾಸರು ಮತ್ತು ಶರಣರು ನಡೆದಾಡಿದ ಪ್ರದೇಶವಾಗಿದೆ. ಈ ಪ್ರದೇಶವು ಶರಣ ಚಳುವಳಿಯ ಕೇಂದ್ರವು ಆಗಿತ್ತು.
ದಕ್ಷಿಣ ಭರತದ ಕುಂಭಮೇಳ, ದಕ್ಷಿಣ ಭಾರತದ ಕಾಶಿ ಮತ್ತು ಉತ್ತರ ಕರ್ನಾಟಕದ ಮತ್ತೊಂದು ಸಿದ್ದಗಂಗಾ ಎಂದೆಲ್ಲಾ ಬಣ್ಣಿಸಲ್ಪಡುವ ಕೊಪ್ಪಳದ ಶ್ರೀ ಗವಿಮಠ ಬಹಳ ಪ್ರಾಚೀನವಾದದ್ದು. ಕೊಪ್ಪಳದ ಶ್ರೀ ಗವಿ ಮಠವು ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿದೆ. ಈ ಮಠಕ್ಕೆಸುಮಾರು ೯೦೦ ರಿಂದ ೧೦೦೦
ವರ್ಷಗಳ ಇತಿಹಾಸವಿದೆ. ಮಠದ ಹಿಂದೆ ಅಶೋಕನ ಶಿಲಾಶಾಸನ ಇದೆ. ಈ ಮಠದ ಮೇಲೆ ಜೈನ ಮತ್ತು ಭೌಧ್ಧ ಧರ್ಮದ ಪ್ರಭಾವವಿದೆ. ಇದು ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ.
೧೧ ನೇ ಶತಮಾನದಲ್ಲಿ ಉತ್ತರ ಭಾರತದ ಕಾಶಿ-ವಾರಣಾಸಿ ಜಂಗಮವಾಡಿ ಮಠದಿಂದ ಶ್ರೀ ರುದ್ರಮುನಿ ಶಿವಾಚಾರ್ಯರು ಧರ್ಮ ಪ್ರಚಾರಾರ್ಥಕ್ಕಾಗಿ ದಕ್ಷಿಣ ಭಾರತಕ್ಕೆ ಬಂದು, ಕರ್ನಾಟಕದ ಕೊಪ್ಪಳ ಗುಡ್ಡದ ಗವಿಯಲ್ಲಿ ತಪಸ್ಸು ಮಾಡುತ್ತಾರೆ. ಉತ್ತರ ಭಾರತದ ಕಾಶಿ-ವಾರಣಾಸಿಯ ಶಿವಾಚಾರ್ಯ ರುದ್ರಮುನಿ ಶಿವಯೋಗಿಗಳು ನೆಲೆಸಿ ನಿಂತ ಬೆಟ್ಟದ ಗವಿಯೇ ಇಂದಿನ ಗವಿ ಮಠವಾಗಿದೆ.

ಕೊಪ್ಪಳದ ಶ್ರೀ ಗವಿ ಮಠದ ಮಹಾಸ್ವಾಮಿಗಳ ಹೆಸರುಗಳು

೧ ಶ್ರೀ ರುದ್ರಮುನಿ ಶಿವಯೋಗಿಗಳು
೨ ಶ್ರೀ ಸಂಗನಬಸವ ಶಿವಯೋಗಿಗಳು
೩ ಶ್ರೀ ಶಿವಲಿಂಗ ಶಿವಯೋಗಿಗಳು
೪ ಶ್ರೀ ಚನ್ನವೀರ ಶಿವಯೋಗಿಗಳು
೫ ಶ್ರೀ ಕರಿಬಸವ ಶಿವಯೋಗಿಗಳು
೬ ಶ್ರೀ ಶಿವಲಿಂಗ ಶಿವಯೋಗಿಗಳು
೭ ಶ್ರಿ ಪುಟ್ಟಸುಚ್ಚನ್ನವೀರ ಶಿವಯೋಗಿಗಳು
೮ ಶ್ರೀ ಚನ್ನಮಲ್ಲಿಕಾರ್ಜುನ ಶಿವಯೋಗಿಗಳು
೯ ಶ್ರೀ ಸಂಗನಬಸವ ಶಿವಯೋಗಿಗಳು
೧೦ ಶ್ರೀಚನ್ನಬಸವ ಶಿವಯೋಗಿಗಳು
೧೧ ಶ್ರಿ ಗವಿಸಿದ್ದೇಶ್ವರ ಶಿವಯೋಗಿಗಳು
೧೨ ಶ್ರೀ ಹಿರಿ ಶಾಂತವೀರ ಶಿವಯೋಗಿಗಳು
೧೩ ಶ್ರೀ ಶಿವಶಾಂತವೀರ ಶಿವಯೋಗಿಗಳು
೧೪ ಶ್ರೀ ಮರಿ ಶಾಂತವೀರ ಶಿವಯೋಗಿಗಳು
೧೫ ಶ್ರೀ ಶಿವಶಾಂತವೀರ ಶಿವಯೋಗಿಗಳು
೧೬ ಶ್ರೀ ಮರಿಶಾಂತವೀರ ಶಿವಯೋಗಿಗಳು
೧೭ ಶ್ರೀ ಶಿವಶಾಂತವೀರ ಶಿವಯೋಗಿಗಳು
೧೮ ಶ್ರೀ ಅಭಿನವ ಗವಿಸಿದ್ದೇಶ್ವರ ಶಿವಯೋಗಿಗಳು.
ಪಟ್ಟಾಧಿಕಾರ ಸ್ವೀಕಾರ ೧೩-೧೨-೨೦೦೨ ರಿಂದ

ಕೊಪ್ಪಳದ ಶ್ರೀ ಗವಿ ಮಠದ ೧೭ ನೇ ಪೀಠಾಧಿಪತಿಯಾಗಿದ್ದ ಶ್ರೀ ಶಿವಶಾಂತವೀರ ಮಹಾ ಸ್ವಾಮಿಗಳು ಶ್ರೀ ಗವಿ ಮಠದಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ಪರ್ವತ ದೇವರು ಎನ್ನುವ ವಿದ್ಯಾರ್ಥಿಯನ್ನು ಗುರುತಿಸಿ ದಿನಾಂಕ ೧೩-೧೨-೨೦೦೨ ರಲ್ಲಿ ೧೮ ನೇ ಪೀಠಾಧಿಪತಿಯಾಗಿ ಪ್ರಸ್ತುತವಿರುವ ಶ್ರೀ ಅಭಿನವಿ ಗವಿಸಿದ್ದೇಶ್ವರ ಮಹಾಸ್ವಾಮಿಯವರಿಗೆ ಪಟ್ಟ ಕಟ್ಟುತ್ತಾರೆ.
ಈಗ ಪ್ರಸ್ತುತವಿರುವ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಮೂಲ ಹೆಸರು ಪರ್ವತ ದೇವರು. ಇವರಿಗೆ ಪಟ್ಟಾಭೀಷೇಕ ಮಾಡಿದ ಮೇಲೆ ಶ್ರಿ ಅಭಿನವಿ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಎಂದು ಹಿಂದಿನ ಪೀಠಾಧಿಪತಿಗಳಾಗಿದ್ದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ನಾಮಕರಣ ಮಾಡಿದ್ದಾರೆ.
ಕೊಪ್ಪಳದ ಶ್ರೀ ಗವಿ ಮಠದ ೧೧ನೇ ಪೀಠಾಧಿಪತಿಯಾದ ಶ್ರೀಗವಿಸಿದ್ದೇಶ್ವರ ಸ್ವಾಮಿಯವರು ಪವಾಡ ಪುರುಷರಾಗಿದ್ದರು ಅಂತಹೇಳಲಾಗುತ್ತಿದೆ. ಇವರ ಸ್ಮರಣಾರ್ಥವಾಗಿ ಕೊಪ್ಪಳ ಶ್ರೀಗವಿಮಠದಲ್ಲಿ ಪ್ರತಿವರ್ಷ ಗವಿಸಿದ್ದೆಶ್ವರ ಜಾತ್ರೆ ನಡೆಯುತ್ತದೆ. ಈ ವರ್ಷ ಜಾತ್ರೆಯು ಇದೇ ಜನವರಿ ೧೫ ರಂದು ಮಹಾರಥೋತ್ಸವ ನಡೆಯಲಿದೆ. ಈ ಜಾತ್ರೆಯು ಒಟ್ಟು ೧೫ ದಿನಗಳ ಕಾಲ ನಡೆಯುತ್ತದೆ.
ಜಾತ್ರೆಗೆ ಪ್ರಸಿದ್ದ ವ್ಯಕ್ತಿಗಳನ್ನು ಕರೆಯಿಸಿ ಉದ್ಘಾಟನೆ ಮಾಡಿಸುತ್ತಾರೆ. ಜಾತ್ರೆಯ ಉದ್ಘಾಟನೆಗೆ ಧರ್ಮಸ್ಥಳದ ವಿರೇಂದ್ರಹೆಗಡೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಭಾರತ ರತ್ನ ಸಿ.ಎನ್ .ಆರ್ .ರಾವ್ ಮೈಸೂರು ಜಿಲ್ಲೆಯ ನಂಜನಗೂಡಿನ ಸುತ್ತೂರ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿಗಳು ಜಾತ್ರೆಗೆ ಬಂದು ಹೋಗಿದ್ದಾರೆ. ಈ ವರ್ಷದ ಜಾತ್ರೆಗೆ ಭಾರತದ ಹಿಂದೂಸ್ತಾನಿ ಗಾಯಕ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಅವರು ಚಾಲನೆ ನೀಡಲಿದ್ದಾರೆ. ಈ ಬಾರಿ ನಾಗತಿಹಳ್ಳಿ ಚಂದ್ರಶೇಖರ್ ಕೂಡಾ ಜಾತ್ರೆಗೆ ಬರಲಿದ್ದಾರೆ.
ಹೆಸರಾಂತ ವಿಜ್ಞಾನಿ ಭಾರತ ರತ್ನ ಸಿ.ಎನ್ .ಆರ್ .ರಾವ್ ರವರು ಜಾತ್ರೆಯನ್ನು ಕಂಡು ಇದು ದಕ್ಷಿಣ ಭಾರತದ ಪುರಿಜಗನ್ನಾಥ ಜಾತ್ರೆಎಂದುಹೇಳಿದ್ದಾರೆ. ಇನ್ನೂ ಅನೇಕ ಮಹಾನೀಯರು ಈ ಜಾತ್ರೆಯನ್ನು ಉತ್ತರ ಭಾರತದಲ್ಲಿ ನಡೆಯುವ ಮಹಾ ಕುಂಭ ಮೇಳ
ಜಾತ್ರೆ ಎಂದರೆ ಕೇವಲ ಜನರು ಗುಂಪು ಸೇರುವ ಸಮಾರಂಭವಲ್ಲ.ಭಕ್ತಿ, ಭಾವನೆಯಿಂದ ಪೂಜೆಸಲ್ಲಿಸುವುದು, ಸಿಹಿತಿಂಡಿತಿನಿಸುಗಳನ್ನು ತಿನ್ನುದಷ್ಟೇಅಲ್ಲ, ಬದಲಾಗಿ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಗಳನ್ನು ಮಾಡಬೇಕು. ಜಾತ್ರೆಯಲ್ಲಿ ಕೇವಲ ಸಂಪ್ರದಾಯಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆದರೆ ಸಾಲದು ಇದರ ಜೊತೆ ಸಾಮಾಜಿಕ ಕಾರ್ಯಕ್ರಮಗಳು ನಡೆಯಬೇಕು ಎಂಬ ಉದ್ದೇಶದಿಂದ ಜಾತ್ರೆಯ ಸಮಯದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಜಾತ್ರೆಗೆ ಬಂದಿರುವ ಜನರಿಗೆ ಸಮಾಜಮುಖಿ ವಿಚಾರ ಹಾಗೂ ಜ್ವಲಂತ ಸಮಸ್ಯೆಗಳ ಕುರಿತು ಅರಿವು ಮೂಡಿಸಲು ಕೆಲವು ಕಾರ್ಯಕ್ರಮಗಳು ಮತ್ತು ಜಾಗೃತಿ ನಡಿಗೆಗಳನ್ನು ಹಮ್ಮಿಕೊಳ್ಳುತ್ತಾರೆ.
ಜಾತ್ರೆಯ ವಿಶೇಷ ಎಂದರೆ ಪ್ರತಿವರ್ಷ ಏನಾದರೂ ಸಾಮಾಜಿಕ ಜವಾಬ್ದಾರಿಯ ಧ್ಯೇಯವನ್ನು ಇಟ್ಟುಕೊಂಡು ಜಾತ್ರೆಮಾಡುವುದು. ಪ್ರತಿಜಾತ್ರೆಗೆ ಒಂದು ಸಂದೇಶವನ್ನು ಇಟ್ಟುಕೋಂಡಿರುತ್ತಾರೆ. ಜಾತ್ರೆ ಮೂಲಕ ಜನರಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಠವು ೨೦೧೫ ರಿಂದ ಪ್ರತಿ ವರ್ಷವೂ ಸಮಾಜಮುಖಿ ಕಾರ‍್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಮಠವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಅವುಗಳನ್ನು ಕಾರ್ಯರೂಪಕ್ಕೆ ತರುತ್ತಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ೨೦೧೫ ರಿಂದ ಶ್ರೀ ಮಠವು ಹಮ್ಮಿಕೊಂಡಿರುವ ಜಾಗೃತಿ ಜಾಥಾ ಕಾರ್ಯಕ್ರಮಗಳ ವಿವರ

ಕ್ರ.ಸಂ. ವರ್ಷ ಜಾಗೃತಿ ಜಾಥಾ ಕಾರ್ಯಕ್ರಮಗಳು

೧ . ೨೦೧೫ ಮಹಾ ರಕ್ತದಾನ ಶಿಬಿರ
೨ . ೨೦೧೬ ಬಾಲ್ಯ ವಿವಾಹ ತಡೆ ಜಾಗೃತಿ ನಡಿಗೆ
೩ . ೨೦೧೭ ಜಲ ದೀಕ್ಷೆ (ಜಲ ಸಂರಕ್ಷಣೆ)
೪ . ೨೦೧೮ ಸಶಕ್ತ ಮನ-ಸಂತೃಪ್ತಿ ಜೀವನ (ನಮ್ಮ ನಡೆ-ಒತ್ತಡ ರಹಿತ ಬದುಕಿನ ಕಡೆ)
೫. ೨೦೧೯ ಕೃಪಾ ಧೃಷ್ಠಿ-ನೇತ್ರದಾನ
೬ . ೨೦೨೦ ಲಕ್ಷ ವೃಕ್ಷ ಉತ್ಸವ (ಕೊಪ್ಪಳ ಜಿಲ್ಲೆಯಲ್ಲಿ ಒಂದು ಲಕ್ಷ ಸಸಿಗಳು ನೆಡುವುದು)
೭ . ೨೦೨೧ ಕೋವಿಡ್-೧೯ ಸಮಯದಲ್ಲಿ ಗಿಣಿಗೇರಿ ಕೆರೆ ಅಭಿವೃದ್ಧಿ, ಕುಕನೂರು ತಾಲೂಕಿನ ಅಡವಿಹಳ್ಳಿ ಗ್ರಾಮ ದತ್ತು ಮತ್ತು ಕ್ಯಾನ್ಸರ್ ತಪಾಸಣೆ ಮತ್ತು ರೋಗಿಗಳಿಗೆ ಸೂಕ್ತ ಚಿಕೆತ್ಸೆ ನೀಡಲಾಗಿದೆ.
೮. ೨೦೨೨ ಲಾಕ್ ಡೌನ್-ಸಮಯದಲ್ಲಿ ಮಠವನ್ನು ಕೋವಿಡ್ ಅಸ್ಪತ್ರೆ ಮಾಡಲಾಗಿತ್ತು.
೯. ೨೦೨೩ ಅಂಗಾಂಗ ದಾನ (ಸತ್ತ ಮೇಲೂ ಬದುಕುವ ಯೋಗ, ಸಾಯುವವನಿಗೆ ಅಂಗಾಂಗ ಯೋಗ).
೧೦‌. ೨೦೨೪ ಕಾಯಕ ದೇವೋಭವ (ಸ್ವಾವಲಂಬಿ ಬದುಕು, ಸಮೃದ್ಧಿ ಬದುಕು, ಸಂತೋಷದ ಬದುಕು).
೧೧. ೨೦೨೫ ಸಕಲ ಚೇತನ (ವಿಕಲ ಚೇತನ ನಡೆ-ಸಕಲ ಚೇತನದ ಕಡೆ) ಕೃತಕ ಅಂಗಾಂಗ ಜಾಗೃತಿ ಅಭಿಯಾನ

ಗವಿಮಠದ ಈಗಿನ ಸ್ವಾಮಿಯವರಿಗೆ ಸಾಮಜಿಕ ಸಮಸ್ಯೆಗಳು, ಪರಿಸರ, ಕೃಷಿ ಹಾಗೂ ಜಲಸಂರಕ್ಷಣೆಯುತ್ತ ಬಹಳ ಕಾಳಜಿಯಿದೆ. ಮಠವು ಜಾತ್ರೆಯ ಅಂಗವಾಗಿ ಪ್ರತಿವರ್ಷವೂ ಯಾವುದಾದರೂ ಒಂದು ಸಮಾಜಕ್ಕೆ ಉಪಯುಕ್ತವಾಗುವ ಚಟುವಟಿಕೆಯನ್ನು ಹಮ್ಮಿಕೊಳ್ಳುತ್ತದೆ. ರಕ್ತದಾನ ಶಿಬಿರ, ಜಲದೀಕ್ಷೆ(ನೀರಿನಸಂರಕ್ಷಣೆ), ಕೃಪಾದೃಷ್ಠಿ(ನೇತ್ರದಾನ), ಲಕ್ಷವೃಕ್ಷೋತ್ಸವ( ಒಂದುಲಕ್ಷಸಸಿವಿತರಣೆ) ಈ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಕೊಪ್ಪಳದ ಗವಿಮಠದ ಸ್ವಾಮೀಜಿಗಳು ಪ್ರತಿ ವರ್ಷ ಸಾಮಾಜಿಕ ಕಳಕಳಿ ಜಾತ್ರೆಯನ್ನಾಗಿ ಪರಿವರ್ತಿಸಿದ್ದಾರೆ. ಪ್ರತಿ ವರ್ಷ ಒಂದೊಂದು ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಜಾತ್ರೆ ನಡೆಸುತ್ತಾರೆ. ೨೦೨೪ ರಲ್ಲಿ ಅಂದರೆ ಕಳೆದ ಬಾರಿ ಜಾತ್ರೆ ವಿಶೇಷ ಕಾಯಕ ದೇವೋಭವ ಮತ್ತು ಸ್ವಾವಲಂಬಿ ಬದುಕು ಎನ್ನುವ ಪರಿಕಲ್ಪನೆಯನ್ನುಕೊಂಡಿದ್ದಾರೆ. ಕರಕುಶಲ ಕಲೆ ಹಾಗೂ ಕೌಶಲ್ಯ ಅಭಿವೃದ್ಧಿ ಉದ್ಯಮದಲ್ಲಿ ತೊಡಗಿ ಜೀವನ ರೂಪಿಸಿಕೊಂಡವರನ್ನು ಹಾಗೂ ಸಾಧಕರನ್ನು ಸಮಾಜಕ್ಕೆ ಪರಿಚಯಸುತ್ತಿದ್ದಾರೆ.
ಉದ್ಯೋಗಕ್ಕಾಗಿ ಅಲೆದಾಡುವ ಯುವಜನತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವದಕ್ಕೆ ಪ್ರೋತ್ಸಾಹಸುತ್ತಿದ್ದಾರೆ. ಜಾತ್ರೆಯಲ್ಲಿ ವಿಕಲಚೇತನರಿಗೆ ಉಚಿತ ಸಾಮೂಹಿಕ ವಿವಾಹದ ಜೊತೆಗೆ ಅವರು ಬದುಕು ಕಟ್ಟಿಕೊಳ್ಳುವುದಕ್ಕೆ ಸ್ವಯಂ ಉದ್ಯೋಗಕ್ಕಾಗಿ ಉತ್ತೇಜನ ನೀಡಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಮಹಾದಾಸೋಹದ ಪ್ರಸಾದದ ವ್ಯವಸ್ಥೆ ಇದೆ. ರಕ್ತದಾನ ಮತ್ತು ನೇತ್ರದಾನದ ಏರ್ಪಡಿಸುತ್ತಾರೆ.
ಈ ಹಿಂದಿನ ಜಾತ್ರೆಗಳಲ್ಲಿ ಬಾಲ್ಯ ವಿವಾಹ ತಡೆಗಟ್ಟುವುದು ಈ ರೀತಿಯ ಜನಪರ ವಿಷಯಗಳ ಕುರಿತು ಅಭಿಯಾನ ಮಾಡಿ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗಿದೆ. ಆದ್ದರಿಂದ ಗವಿಸಿದ್ದೇಶ್ವರ ಜಾತ್ರೆ ಎಂದರೆ ತೇರಿಗೆ ಉತ್ತತ್ತಿ ಮತ್ತು ಬಾಳೆಹಣ್ಣು ಎಸೆದು, ಕಾಯಿಹೊಡೆದು ಪ್ರಸಾದ ಸೇವಿಸುವುದು ಮಾತ್ರವಲ್ಲ. ಈ ಜಾತ್ರೆಯ ಭಕ್ತಾಧಿಗಳು ಸಾಮಾಜಿಕ ಜವಾಬ್ದಾರಿಯ ವಿಷಯವನ್ನು ತಲೆಯಲ್ಲಿ ಹಾಕಿಕೊಂಡು ತಮ್ಮತಮ್ಮ ಮನೆಗೆ ತೆರಳುತ್ತಾರೆ. ಸಾಮಾಜಿಕಮುಖಿ ಚಿಂತನೆಗಳನ್ನು ಜಾತ್ರೆಯ ಮೂಲಕ ಜನರಿಗೆ ತಿಳಿಸುತ್ತಿದ್ದಾರೆ. ಆದ್ದರಿಂದ ಬೇರೆಬೇರೆ ಜಾತ್ರೆಗಿಂತ ಈ ಜಾತ್ರೆ ಬಹಳ ಭಿನ್ನವಾದದ್ದು.
ಈ ಜಾತ್ರೆಯ ರಥೋತ್ಸವಕ್ಕೆ ಇತ್ತಿಚಿನ ವರ್ಷಗಳಲ್ಲಿ(ಕೋವಿಡ್ ಸಮಯ ಬಿಟ್ಟು) ಸುಮಾರು ಏಳು ಎಂಟು ಲಕ್ಷ ಜನರು ಸೇರುತ್ತಿದ್ದಾರೆ. ಗವಿಮಠದವರು ಈ ಜನರನ್ನು ಹಲವು ಸಾಮಾಜಿಕ ಜಾಗೃತಿಗಳಿಗಾಗಿ ಬಳಸಿಕೊಂಡು ಅವರಿಗೆ ಸಾಮಾಜಿಕ ಜವಾಬ್ದಾರಿಯನ್ನು ಮತ್ತು ತಿಳಿವಳಿಕೆ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ.
ಜಾತ್ರೆಯಲ್ಲಿ ಸುಮಾರು ೧೫ ದಿನಗಳ ಕಾಲ ನಡೆಯುತ್ತದೆ. ಇಷ್ಟು ದಿನಗಳ ಕಾಲ ನಿತ್ಯ ದಾಸೋಹ ಇರುತ್ತದೆ. ಇಲ್ಲಿ ಯಾವುದೇ ಜಾತಿ ಮತ್ತು ಬೇಧಭಾವನೆ ಮಾಡಲಾರದೇ ಪ್ರಸಾದವನ್ನು ಸ್ವೀಕರಿಸುತ್ತಾರೆ. ಜಾತ್ರೆಯಲ್ಲಿ ಸಾಂಸ್ಕೃತಿಕ ,ಸಾಹಿತ್ಯ, ಮಾನವೀಯ ಮೌಲ್ಯ, ಸಮಾಜಸೇವೆ, ಸಾಧಕರ ಜೊತೆ ಸಂವಾದ, ಪರಿಸರ ರಕ್ಷಣೆ, ಜಲ ಸಂರಕ್ಷಣೆ, ಮನೋರಂಜನೆ, ಧಾರ್ಮಿಕ ಸಂಗೀತ, ಪ್ರವಚನ ಮತ್ತು ಹಾಸ್ಯದ ಕಾರ‍್ಯಕ್ರಮಗಳು ನಡೆಯುತ್ತವೆ. ಇದರ ಜೊತೆಗೆ ಜನಪದ ಕಲೆಗಳಿಗೆ ಮತ್ತು ಗ್ರಾಮೀಣ ಕ್ರೀಡೆಗಳಾದ ಕುಸ್ತಿ, ಮಲ್ಲಕಂಭದಂತವುಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಮಠದ ಪಕ್ಕದಲ್ಲಿ ತೆಪ್ಪೆ ಉತ್ಸಾಹವನ್ನು ಮಾಡಲಾಗುತ್ತಿದೆ.
ಸಾಮಾಜಿಕ ಜವಾಬ್ದಾರಿಯ ವಿಷಯಗಳ ಬಗ್ಗೆ ತಜ್ಞರಿಂದ ವಿಶೇಷ ಉಪನ್ಯಾಸಗಳು ಇರುತ್ತವೆ. ನಾಟಕಗಳ ಪ್ರದರ್ಶನ ನಡೆಯುತ್ತವೆ. ರೈತಾಪಿ ಜನರಿಗೆ ಕೃಷಿ ಕುರಿತು ಮಾಹಿತಿ ನೀಡುವುದಕ್ಕೆ ಪ್ರದರ್ಶನ ಮಳಿಗೆಗಳು ಇರುತ್ತವೆ. ಹಾಗೇಯೇ ಕೃಷಿಗೆ ಸಂಬಂಧಿಸಿದ ಗೋಷ್ಠಿ ಮತ್ತು ಉಪನ್ಯಾಸಗಳು ಇರುತ್ತವೆ. ಗವಿಮಠದ ವೈಶಿಷ್ಟ್ಯ ಇರುವುದು ಇಲ್ಲಿಯೇ. ಇವುಗಳನ್ನು ಸಾವಿರಾರು ಜನರು ನೋಡುತ್ತಾರೆ.

  • ಡಾ. ನರಸಿಂಹಗುಂಜಹಳ್ಳಿ,
    ಸಹಾಯಕ ಪ್ರಾಧ್ಯಾಪಕರು ಪತ್ರಿಕೋದ್ಯಮ ವಿಭಾಗ
    ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು,
    ಕೊಪ್ಪಳ- ೫೮೩೨೩೧
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ