ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭೀಮಾ ನಗರದ ಸರಕಾರಿ ಶಾಲೆಯ ಮೇಲ್ಚಾವಣಿಯ ಮುಂದಿನ ಭಾಗವು ರಾತ್ರಿ ಕಡಿದು ಬಿದ್ದಿದ್ದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅನಾಹುತದಿಂದ ಪಾರಾಗಿದ್ದಾರೆ. ಈ ಶಾಲೆಯಲ್ಲಿ 120 ವಿದ್ಯಾರ್ಥಿಗಳು ಓದುತ್ತಿದ್ದು, ಈ ಶಾಲೆಯಲ್ಲಿ 6 ಕೋಣೆಗಳಿದ್ದರೂ ಅದರಲ್ಲಿ ಕೇವಲ 1 ಕೋಣೆ ಮಾತ್ರ ಉಪಯೋಗಿಸಲು ಯೋಗ್ಯವಾಗಿದೆ.
ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಶಾಲಾ ಕೋಣೆಗಳ ಮೇಲ್ಚಾವಣಿ ಅಲ್ಲಲ್ಲಿ ಕಡಿದು ಬಿದ್ದಿದ್ದು ಶಾಲೆ ಕಟ್ಟಡವು ಅತ್ಯಂತ ಶಿಥಿಲ ಸ್ಥಿತಿಯಲ್ಲಿದೆ, ಹಳೆಯ ಹಾಗೂ ದುರ್ಬಲವಾದ ಕಟ್ಟಡದಲ್ಲಿ ನೂರಾರು ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರೆಸುವಂತಾಗಿದೆ.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಯಾವಾಗ ಕಟ್ಟಡ ಕುಸಿಯುತ್ತದೆಯೋ ಎಂಬ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಮುಖ್ಯೋಪಾಧ್ಯಾಯರನ್ನು ವಿಚಾರಿಸಿದಾಗ ಈ ಸಮಸ್ಯೆಯನ್ನು ಬಗೆಹರಿಸಲು ಸಂಬಂಧ ಪಟ್ಟ ನಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಹೇಳಿದರು.
ಈ ಕುರಿತು ಊರಿನ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರ ಮತ್ತು ಜನಪ್ರತಿನಿಧಿಗಳು ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವರದಿ ಮನೋಜ್ ನಿಂಬಾಳ
