ಪ್ರಜಾರಾಜ್ಯೋತ್ಸವದ ಅಂಗವಾಗಿ ಶಿಕ್ಷಕ – ಸಾಹಿತಿಗಳಾದ ಚಿರಂಜೀವಿ ರೋಡಕರ್ ಅವರ ವಿಶೇಷ ಲೇಖನ.
ವಿಶ್ವದ ಒಂದು 195 ದೇಶದಲ್ಲಿ 176 ದೇಶಗಳು ಗಣರಾಜ್ಯಗಳಾಗಿವೆ. ಯಾವ ದೇಶ ಲಿಖಿತ ಸಂವಿಧಾನ ಹೊಂದಿ ಚುನಾಯಿತ ಜನಪ್ರತಿನಿಧಿಗಳಿಂದ ಆಡಳಿತ ನಡೆಸುತ್ತದೆಯೋ, ಆ ರಾಜ್ಯವನ್ನು ಗಣರಾಜ್ಯ ಎನ್ನುತ್ತೇವೆ. ನಮ್ಮ ಭಾರತ ದೇಶ ಜಗತ್ತಿನಲ್ಲಿಯೇ ಅತಿ ದೊಡ್ಡ ಲಿಖಿತ ಸಂವಿಧಾನ ಹೊಂದಿರುವ ದೇಶವಾಗಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವೇ ಮತ್ತು ಇಂತಹ ಹೆಮ್ಮೆಯ ವಿಷಯಕ್ಕೆ ನಾವು ಡಾಕ್ಟರ್. ಬಿ ಆರ್ ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಲೇಬೇಕು.
ಇಡೀ ಜಗತ್ತಿನಲ್ಲಿಯೇ ಮೊದಲ ಸಂಸತ್ತನ್ನು ಹೊಂದಿರುವ ದೇಶ ನಮ್ಮದಾಗಿದೆ. ಗೌತಮ ಬುದ್ಧರ ಕಾಲದಲ್ಲಿಯೂ ಸಂಸತ್ತು ಇತ್ತು, 12ನೇ ಶತಮಾನದಲ್ಲಿ ಬಸವಾದಿ ಶರಣರನ್ನೊಳಗೊಂಡ ಅನುಭವ ಮಂಟಪವು ಕೂಡಾ ಇಂದಿನ ಸಂಸತ್ತನ್ನೇ ಹೋಲುತ್ತದೆ. ನಂತರದಲ್ಲಿ ಬ್ರಿಟಿಷ್ ಆಡಳಿತದಲ್ಲಿ ಲಂಡನ್ನಿನಲ್ಲಿ ರೂಪಿತವಾದ ಕಾನೂನುಗಳು ಬ್ರಿಟಿಷ್ ಭಾರತದಲ್ಲಿ ಜಾರಿಯಾಗುತ್ತಾ ಸ್ವಾತಂತ್ರ್ಯ ಪೂರ್ವದಲ್ಲಿಯೂ ಬ್ರಿಟಿಷರನ್ನು ಮತ್ತು ಭಾರತೀಯರನ್ನು ಒಳಗೊಂಡ ಸಮಿತಿಗಳು ಮತ್ತು ಆಯೋಗಗಳು ರಚಿತವಾಗುತ್ತಾ ಬರುತ್ತವೆ. ಸ್ವಾತಂತ್ರ್ಯಾ ನಂತರ ಜಾರಿಯಾದ ಸಂವಿಧಾನದಿಂದ ಇಡೀ ದೇಶದಲ್ಲಿಯೇ ಬಲಿಷ್ಠ ಪ್ರಜಾಪ್ರಭುತ್ವವನ್ನು ಹೊಂದಿದ ದೇಶವಾಗಿ ಭಾರತ ಪ್ರಕಾಶಿಸುತ್ತದೆ.
ರಾಷ್ಟ್ರೀಯ ಹೋರಾಟದ ಸದಾಶಯಗಳನ್ನು, ನವ ಭಾರತಕ್ಕೆ ಅಗತ್ಯವಾದ ನೀಲನಕ್ಷೆಯನ್ನು ಸಿದ್ಧಪಡಿಸುವ ಸಲುವಾಗಿ ಅಂದಿನ ನಮ್ಮ ನಾಯಕರುಗಳು ನಮ್ಮ ದೇಶಕ್ಕೆ ನಮ್ಮದೇ ಆದ ಸಂವಿಧಾನ ಇರಬೇಕು ಮತ್ತು ಅದನ್ನು ಭಾರತೀಯರೇ ರಚಿಸಬೇಕು ಎಂಬ ಮಹಾದಾಶೆಯಿಂದ ಈ ಮಹಾ ಕಾರ್ಯವನ್ನು ಆ ಕಾಲದಲ್ಲಿ ಅತಿ ಹೆಚ್ಚು ಓದಿದ್ದ, ತಿಳಿದುಕೊಂಡಿದ್ದ, ಏಕೈಕ ವ್ಯಕ್ತಿಯಾದ ಡಾಕ್ಟರ್. ಬಿ ಆರ್ ಅಂಬೇಡ್ಕರ್ ಅವರಿಗೆ ಸಂವಿಧಾನ ರಚಿಸುವ ಜವಾಬ್ದಾರಿಯನ್ನು ನೀಡುತ್ತಾರೆ. ಅಂಬೇಡ್ಕರ್ ಅವರು ಕರಡು ಸಮಿತಿಗೆ ಅಧ್ಯಕ್ಷರಾಗಿ ತಮ್ಮ ಅಪಾರ ಶ್ರಮದಿಂದ, ತಾಳ್ಮೆಯಿಂದ, ಅಧ್ಯಯನದಿಂದ ವಿವೇಕದಿಂದ ದಿನಕ್ಕೆ 18 ರಿಂದ 20 ಗಂಟೆಗಳ ಕಾಲ ನಿರಂತರ ಕೆಲಸ ಮಾಡುತ್ತಾರೆ. 2 ವರ್ಷ 11 ತಿಂಗಳು 18 ದಿನಗಳ ಸತತ ಪರಿಶ್ರಮದ ಫಲವಾಗಿ ಭಾರತದ ಸಂವಿಧಾನ ರೂಪುಗೊಳ್ಳುತ್ತದೆ.
ಭಾರತ ದೇಶವನ್ನು ಅರ್ಥಮಾಡಿಕೊಳ್ಳದೆ ಭಾರತದ ಸಂವಿಧಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಭಾರತ ದೇಶವೆಂದರೆ ಕೇವಲ ಅಲ್ಲಿನ ಪರ್ವತಗಳು, ಕಣಿವೆಗಳು,ಸಾಗರ, ಸರೋವರಗಳು, ನದಿ ಕಾಡು-ಬೆಟ್ಟ ಗುಡ್ಡ ಮಾತ್ರವಲ್ಲ. ತೆಲುಗಿನ ಮಹಾಕವಿ ಮತ್ತು ಸಮಾಜ ಸುಧಾರಕ ವೆಂಕಟ ಅಪ್ಪಾರಾವ್ ಗುರ್ಜಾಡ್ ಒಂದು ಶತಮಾನದ ಹಿಂದೆಯೇ ಹೇಳಿದ್ದಾರೆ ” ದೇಶಮಂಟೆ ಮಟ್ಟಿ ಕಾದು ದೇಶ ಮಂಟೆ ಮನುಷಲು ” ಅಂದರೆ ದೇಶವೆಂದರೆ ಕೇವಲ ಮಣ್ಣಲ್ಲ, ದೇಶವೆಂದರೆ ಅಲ್ಲಿನ ಮನುಷ್ಯರು ಎಂದು.
ಭಾರತದ ಸಂವಿಧಾನ ಶೂನ್ಯದಿಂದ ಜನ್ಮತಾಳಿಲ್ಲ. ಪ್ರತಿ ಪೀಳಿಗೆಯು ನಿರಂತರವಾಗಿ ತಮ್ಮ ಕೊಡುಗೆಗಳನ್ನು ನೀಡಿ ಇಂದಿನ ಭಾರತೀಯ ಸಂವಿಧಾನ ರೂಪಿತವಾಗಿದೆ. ಬ್ರಿಟಿಷ್ ಸರ್ಕಾರ 1773 ರಲ್ಲಿ ರೇಗುಲೇಟಿಂಗ್ ಆಕ್ಟ್ ಅನ್ನು ಅಂಗೀಕರಿಸುತ್ತದೆ ಇದು ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಪ್ರಪ್ರಥಮ ಲಿಖಿತ ದಾಖಲೆಯಾಯಿತು. 1784ರಲ್ಲಿ ಬಂದ ಪಿಟ್ಸ್ ಇಂಡಿಯಾ ಆಕ್ಟ್, 1786, 1793, 1813ರ ಕಾಯ್ದೆಗಳು ಇಂದಿನ ಸಂವಿಧಾನಕ್ಕೆ ಬುನಾದಿಯಾಗಿವೆ ಅಂತಲೇ ಹೇಳಬಹುದು. 1853ರ ಕಾಯ್ದೆಯಿಂದ ಭಾರತದಲ್ಲಿ ಸಂಸದೀಯ ಪದ್ಧತಿ ಪ್ರಾರಂಭವಾಗುತ್ತದೆ. ಅದೇ ರೀತಿ 1861ರ ಕಾಯ್ದೆ ಭಾರತೀಯ ಪರಿಷತ್ ಅಧಿನಿಯಮದಂತೆ ಮೊಟ್ಟಮೊದಲು ಬ್ರಿಟಿಷ್ ಶಾಸನಸಭೆಗೆ ಭಾರತೀಯರು ಪ್ರವೇಶಿಸುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ. 1909ರ ಮಿಂಟೋ ಮಾರ್ಲೆ ಸುಧಾರಣೆಗಳು, 1917ರ ಮೌಂಟೇಗೋನ ಘೋಷಣೆ, 1919ರ ಅಧಿನಿಯಮ ಪ್ರತಿಯೊಂದು ಕೂಡ ನಮ್ಮ ದೇಶಕ್ಕೆ ಕಾನೂನುಗಳಾಗುತ್ತ ಹೋದವು. ಮುಖ್ಯವಾಗಿ 1935 ರ ಭಾರತ ಸರ್ಕಾರದ ಕಾಯ್ದೆ ಅಧಿನಿಯಮ, ಕೇಂದ್ರದಲ್ಲಿ ದ್ವಿಪ್ರಭುತ್ವವನ್ನು ಸ್ಥಾಪಿಸಿತು. ಪ್ರಾಂತೀಯ ಮಟ್ಟದಲ್ಲಿದ್ದ ದ್ವಿಪ್ರಭುತ್ವವನ್ನು ರದ್ದುಗೊಳಿಸಿತು. 1940ರ ಲಾರ್ಡ್ ಲಿನ್ ಲಿತ್ ಗೋ ಮಾಡಿದ ಅಗಸ್ಟ್ ಕೊಡುಗೆಯಲ್ಲಿ ಹೊಸ ಸಂವಿಧಾನ ರಚನೆ ಪ್ರಮುಖವಾಗಿ ಭಾರತೀಯರ ಹೊಣೆಗಾರಿಕೆಯಾಗುತ್ತದೆ ಎಂಬ ಕೊಡುಗೆಯೊಂದಿಗೆ ಇಂದಿನ ನಮ್ಮ ಸಂವಿಧಾನಕ್ಕೆ ಮುನ್ನುಡಿ ಬರೆಯಿತು.
1947ರ ಆಗಸ್ಟ್ 29ರ ಸಂವಿಧಾನ ಸಭೆ ಸೇರಿ ಸಂವಿಧಾನ ಕರಡು ಸಮಿತಿಯನ್ನು ರಚಿಸಿತು. ಕರಡು ಸಮಿತಿಗೆ ಡಾಕ್ಟರ್ ಅಂಬೇಡ್ಕರ್ ಅವರು ಅಧ್ಯಕ್ಷರಾಗಿ ಸಂಪೂರ್ಣ ಜವಾಬ್ದಾರಿಯಿಂದ ಭಾರತಕ್ಕೆ ಸಂವಿಧಾನ ರಚಿಸಿ ನವಂಬರ್ 26, 1949 ರಂದು ಸಂವಿಧಾನ ಸಭೆಯ ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಒಪ್ಪಿಸಿದರು. 1930 ಜನವರಿ 26ರ ಲಾಹೋರ್ ಅಧಿವೇಶನದಲ್ಲಿ ಘೋಷಿಸಿದ ಪೂರ್ಣ ಸ್ವರಾಜ್ಯದ ನೆನಪಿಗಾಗಿ ಜನವರಿ 26, 1950 ರಂದು ನಮ್ಮ ಹೆಮ್ಮೆಯ ಭಾರತದ ಸಂವಿಧಾನ ಜಾರಿಯಾಗುತ್ತದೆ.
ಸಂವಿಧಾನದ ಮೂಲ ಆಶಯವೇ ಸಾಮಾಜಿಕ ನ್ಯಾಯ. ನಮ್ಮ ಸಮಾಜದಲ್ಲಿರುವ ಎಲ್ಲಾ ರೀತಿಯ ಅಸಮಾನತೆಯನ್ನು ಹೋಗಲಾಡಿಸಿ ಹಿಂದುಳಿದವರ ಬಡವರ ದುರ್ಬಲರ ತುಳಿತಕ್ಕೆ ಒಳಗಾದ ಅಸಹಾಯಕರನ್ನು ರಾಜಕೀಯವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲಕ್ಕೆ ಎತ್ತುವುದೇ ಸಂವಿಧಾನದ ಗುರಿಯಾಗಿದೆ. ನಮ್ಮ ಸಂವಿಧಾನದಲ್ಲಿ ಲಿಂಗ ಬೇಧಕ್ಕೆ ಅವಕಾಶವಿಲ್ಲ, ಜಾತಿ ಆಧಾರಿತ, ಧರ್ಮಧಾರಿತ ಬೇದಕ್ಕೆ ಅವಕಾಶವಿಲ್ಲ ಆ ಅವಕಾಶದಿಂದಲೇ ಇಂದು ಸಾಮಾನ್ಯ ವ್ಯಕ್ತಿಯು ಕೂಡಾ ಈ ದೇಶದ ಪ್ರಧಾನ ಮಂತ್ರಿಯೂ ಆಗಬಹುದು, ರಾಜ್ಯದ ಮುಖ್ಯಮಂತ್ರಿಯೂ ಆಗಬಹುದು ಹಲವು ಪ್ರಮುಖ ಸ್ಥಾನಗಳನ್ನು, ಹುದ್ದೆಗಳನ್ನು ಅಲಂಕರಿಸಬಹುದು. ಅದಕ್ಕೆ ಅಂಬೇಡ್ಕರ್ ಹೇಳುತ್ತಾರೆ ” ಇನ್ನು ಮುಂದೆ ಈ ದೇಶವನ್ನಾಳುವವರು ವಂಶ ಪರಂಪರೆಯಾಗಿ ಮಹಾರಾಣಿಯರ ಗರ್ಭದಲ್ಲಿ ಹುಟ್ಟದಂತೆ ರಾಣಿಯರ ಗರ್ಭಕ್ಕೆ ಆಪರೇಷನ್ ಮಾಡಿ ಮತದಾರರ ಪೆಟ್ಟಿಗೆಯಿಂದ ಜನ್ಮ ತಾಳುವಂತೆ ಮಾಡಿದ್ದೇನೆ ” ಎಂದು. ಇಂತಹ ಮಹತ್ವದ ಜವಾಬ್ದಾರಿಯನ್ನ ನಮಗೆ ಕೊಟ್ಟಾಗ ನಾವು ಯಾವುದೇ ಆಮಿಷಕ್ಕೆ ಒಳಗಾಗದೆ ವಿವೇಚನೆಯಿಂದ ಮತ ಚಲಾಯಿಸಬೇಕಾಗುತ್ತದೆ. ಒಂದು ಕಾಲದಲ್ಲಿ ನಮ್ಮ ದೇಶದಲ್ಲಿದ್ದ ರಾಜಪ್ರಭುತ್ವ ವ್ಯವಸ್ಥೆ ಇಂದು ಮರೆಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಪ್ರತಿನಿಧಿಯ ಆಗಬಹುದು ಅಧಿಕಾರಿಯೂ ಆಗಬಹುದು. ಇದೇ ಪ್ರಜಾಪ್ರಭುತ್ವ ಜಾರಿಯಾದ ದಿನ ನಮ್ಮ ನಾಡಿನ ರಾಷ್ಟ್ರ ಕವಿ ಕುವೆಂಪು ಅವರು ” ಕೊನೆಗೊಂಡಿತು ಒರೋರ್ವರ ಗರ್ವದ ಕಾಲ, ಇದು ಸರ್ವರ ಕಾಲ, ಸರ್ವೋದಯ ಸರ್ವೋದಯ ಸರ್ವೋದಯ ಯುಗ ಮಂತ್ರ ಸರ್ವೋದಯವೇ ಸ್ವಾತಂತ್ರ್ಯ ಶ್ರೀತಂತ್ರ, ಮೇಲಿಲ್ಲವೋ ಕೀಳಿಲ್ಲವೋ ಸರ್ವ ಸಮನಾದ ರಾಜ್ಯ ಅಧ್ಯಕ್ಷನೋ, ಸೇನಾನಿಯೋ, ಕಮ್ಮಾರನೋ, ಚಮ್ಮಾರನೋ ಕಾಯಕವೇಲ್ಲವೂ ಪೂಜ್ಯ ” ಎಂದು ಹೇಳಿ ಎಲ್ಲಾ ಕಾಯಕಗಳು, ಕಾಯಕ ಜೀವಿಗಳು ಸರ್ವ ಸಮಾನ ಎಂದು ಹೇಳಿ ಸಂವಿಧಾನದ ಆಶಯವನ್ನು ಒತ್ತಿ ಹೇಳಿದರು.
ಸಮಾಜದಲ್ಲಿ ಇದ್ದ ಅನೇಕ ಕಂದಾಚಾರಗಳು, ಅಸಮಾನತೆ ಲಿಂಗ ತಾರತಮ್ಯ, ಅಸ್ಪೃಶ್ಯತೆ, ಬಡತನ ಮುಂತಾದ ಸಾಮಾಜಿಕ ಅನಿಷ್ಟಗಳಿಗೆ ನಮ್ಮ ಸಂವಿಧಾನ ದಿವ್ಯ ಔಷಧಿಯಾಗಿದೆ. ನಮ್ಮ ಸಂವಿಧಾನ ಕೊಡ ಮಾಡಿರುವ ಕಾನೂನುಗಳನ್ನು ಬಳಸಿಕೊಂಡು ಜಾರಿಗೆ ತಂದ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳ ಪರಿಣಾಮವಾಗಿ ಮಹಿಳೆಯರು ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿಯವರು,ಪರಿಶಿಷ್ಟ ಪಂಗಡದವರ ಜನರ ಸ್ಥಿತಿಗತಿಯಲ್ಲಿ ಸುಧಾರಣೆಯನ್ನು ಹಾಗೂ ಅಭಿವೃದ್ಧಿಯನ್ನು ಕಾಣುತ್ತೇವೆ.
ನಮ್ಮ ಸಂವಿಧಾನದ ಪ್ರಥಮ ವಾಕ್ಯಗಳು ” ಭಾರತದ ಜನತೆಯಾದ ನಾವು ” ಎಂದು ಪ್ರಾರಂಭವಾಗುತ್ತದೆ ಅದರ ಅರ್ಥ ಈ ದೇಶದ ವರ್ತಮಾನ ಮತ್ತು ಭವಿಷ್ಯಗಳಿಗೆ ಅಂತಿಮ ವಾರಸುದಾರರು ನಾವೇ ಹೊರತು ಯಾವ ಸರ್ಕಾರಗಳು ಅಲ್ಲ, ರಾಜಕೀಯ ಪಕ್ಷವೂ ಅಲ್ಲ ಎಂಬುದು. ನಾವು ಕೂಡಾ ಈ ದೇಶದ ಪ್ರಜೆಗಳಾಗಿ ನಮ್ಮ ನಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿ ಭವ್ಯ ಭಾರತಕ್ಕೆ ನಮ್ಮ ಕೊಡುಗೆಯನ್ನು ನೀಡಬೇಕು, ಅದಕ್ಕೆ ಅಂಬೇಡ್ಕರ್ ಹೇಳುತ್ತಾರೆ “ಯಾವುದೇ ಸಂವಿಧಾನ ಅದು ರಚಿಸಲ್ಪಟ್ಟ ಪದಗಳಿಂದ ಶ್ರೇಷ್ಠವಾಗುವುದಿಲ್ಲ ಅದನ್ನು ಬಳಸುವ ಜನರು ಅಸಮರ್ಥರಿದ್ದರೆ ಸಂವಿಧಾನವು ಕೂಡಾ ಕೆಟ್ಟ ಹಾಗೂ ನಿಶಕ್ತ ಸಂವಿಧಾನವಾಗುತ್ತದೆ, ಎಷ್ಟೇ ಕೆಟ್ಟ ಪದಗಳನ್ನು ಬಳಸಿ ರಚಿಸಿದ ಸಂವಿಧಾನವಾಗಿದ್ದರೂ ಕೂಡಾ ಅದನ್ನು ಬಳಸುವ ಜನ ಕಾರ್ಯದಕ್ಷರು ಗುಣವಂತರು ಮತ್ತು ರಾಷ್ಟ್ರ ಪ್ರೇಮಿಯೂ ಆಗಿದ್ದರೆ, ಅಂತಹ ಸಂವಿಧಾನ ಶ್ರೇಷ್ಠ ಸಂವಿಧಾನ ಆಗುತ್ತದೆ ” ಎಂದು.
ಸ್ವತಂತ್ರ ಸಿಕ್ಕಾಗ ನಮ್ಮ ದೇಶದ ಸ್ಥಿತಿ ಸರ್ವ ವಿಧದಲ್ಲೂ ಶೂನ್ಯವಾಗಿತ್ತು, ಅಂತಹ ಸ್ಥಿತಿಯಲ್ಲಿ ಸ್ವತಂತ್ರ ಸಿಕ್ಕ ಕೇವಲ 78 ವರ್ಷದಲ್ಲಿ ಜಗತ್ತಿನಲ್ಲಿಯೇ ಸೂಪರ್ ಪವರ್ ದೇಶವಾಗಿ ನಮ್ಮ ಭಾರತ ಮಿಂಚುತ್ತಿದೆ ಎಂದರೆ ಅದಕ್ಕೆ ಬಾಬಾ ಸಾಹೇಬರು ರಚಿಸಿದ ಸಂವಿಧಾನ ಕಾರಣವಾಗಿದೆ. ಸಂವಿಧಾನ ನಮ್ಮ ದೇಶದ ಧರ್ಮ ಗ್ರಂಥವಾಗಿದೆ, ಸಂವಿಧಾನ ಈ ದೇಶದ ಬಹುಜನರ ಉಸಿರಾಗಿದೆ, ಬಹುತ್ವವನ್ನು ಕಾಪಾಡುತ್ತಾ, ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಾ, ಸರ್ವಧರ್ಮ ಸಮನ್ವಯ ಎತ್ತಿ ಹಿಡಿಯುತ್ತಾ ಸಂವಿಧಾನವು ಭೀಮ ಮಾರ್ಗಧೀ ಸಾಗುತ್ತಿದೆ.
ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಹೇಳುತ್ತಾರೆ ” ಭಾರತ ದೇಶದಿಂದ ನಾನೇನಾದರೂ ತೆಗೆದುಕೊಂಡು ಹೋಗಲು ಇಚ್ಚಿಸುವುದಾದರೆ ಅದು ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಮಾತ್ರ ” ಎಂದು.
ಅದೇ ರೀತಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳುತ್ತಾರೆ “ಅಂಬೇಡ್ಕರ್ ಅವರು ರಚಿಸಿದ ಶಕ್ತಿಶಾಲಿ ಸಂವಿಧಾನವು ಇಂದು ವಿಶ್ವದ ಮಾದರಿ ಸಂವಿಧಾನವಾಗಿದೆ ” ಎಂದು.
ಇಡೀ ಜಗತ್ತೇ ಕೊಂಡಾಡುವ ಸಂವಿಧಾನ ನಮ್ಮದು ಎಂಬ ಹೆಮ್ಮೆ ನಮಗಿದೆ. ಧರ್ಮ ಗ್ರಂಥಗಳು ಆಯಾ ಧರ್ಮದವರಿಗೆ ಹೇಗೆ ಬದುಕಬೇಕು? ಎಂಬುದನ್ನು ತಿಳಿಸಿದರೆ ನಮ್ಮ ಸಂವಿಧಾನ ಭಾರತೀಯರು ಹೇಗೆ ಇರಬೇಕೆಂಬುದನ್ನು? ತಿಳಿಸುತ್ತದೆ. ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ ಜೊತೆಗೆ ಕರ್ತವ್ಯಗಳನ್ನು ಕೂಡಾ ತಿಳಿಸಿಕೊಟ್ಟಿದೆ ಅಂಬೇಡ್ಕರ್ ಅವರ ಮೂಲ ಆಶಯವಾದ ಸ್ವಾತಂತ್ರ್ಯ ಸಮಾನತೆ ಮತ್ತು ಭಾತೃತ್ವವನ್ನು ಕಲಿಸಿದೆ ಈ ಎಲ್ಲವುಗಳಿಂದ ನಮಗೆ ಸಂವಿಧಾನ ಶ್ರೇಷ್ಠವಾಗಿದೆ.
ಇಂದಿನ ವಿದ್ಯಾರ್ಥಿಗಳು ಯುವ ಜನತೆ ನೌಕರವರ್ಗ, ರಾಜಕೀಯ ಧುರೀಣರು ಸಂವಿಧಾನದ ಮೂಲ ಆಶಯಗಳಿಗೆ ಅನುಗುಣವಾಗಿ ನಮ್ಮ ಬದುಕನ್ನು ಆದರ್ಶವಾಗಿರಿಸಿಕೊಂಡು ದೇಶದ ಉನ್ನತಿಗೆ ಶ್ರಮಿಸಬೇಕು. ದೇಶಭಕ್ತಿ, ಗೌರವ ಉಳಿಸಿ ಬೆಳೆಸಬೇಕು, ಅಂಬೇಡ್ಕರ್ ಕಂಡ ಪ್ರಭುದ್ಧ ಭಾರತಕ್ಕೆ ಭದ್ರಬುನಾದಿ ಹಾಕಬೇಕು, ಆಗ ಮಾತ್ರ ಸ್ವತಂತ್ರಕ್ಕೆ ಹೋರಾಡಿದ ಮಹಾನ್ ನಾಯಕರುಗಳ ಮತ್ತು ಸಂವಿಧಾನ ರಚನೆಗೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಆಶಯ ಕನಸು ಈಡೇರುತ್ತದೆ.
- ಚಿರಂಜೀವಿ ರೋಡಕರ್ ರಾಯಚೂರು.
(ಶಿಕ್ಷಕರು – ಸಾಹಿತಿಗಳು),
~ ಜಿಲ್ಲಾಧ್ಯಕ್ಷರು KSSRC ಬಾಗಲಕೋಟ,
~ ಜಿಲ್ಲಾ ಕಾರ್ಯದರ್ಶಿಗಳು
ದ.ಸಾ.ಪ ಬಾಗಲಕೋಟೆ.
