ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಹೆಚ್ಚಾಗಿರುವ ಅಕ್ರಮ ಮೀಟರ್ ಬಡ್ಡಿ ದಂಧೆಯನ್ನು ಶತಾಯಗತಾಯ ಬಂದ್ ಮಾಡಲೇಬೇಕು ಎಂದು ಪಣ ತೊಟ್ಟಿರುವ ಎಸ್ ಪಿ ಎಂ. ನಾರಾಯಣ್ ನೇತೃತ್ವದ ತಂಡ ಸೋಮವಾರ ಮುಂಡಗೋಡದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿತ್ತು.
ಮುಂಡಗೋಡದಲ್ಲಿ ನಡೆಯುತ್ತಿದ್ದ ಮೀಟರ್ ಬಡ್ಡಿ ದಂಧೆಯ ಕರಾಳತೆ ಕುರಿತು ಮಾಹಿತಿ ಇದ್ದ ಎಸ್ ಪಿ ಸರಿಯಾದ ಸಮಯಕ್ಕೆ ಕಾಯುತ್ತಿದ್ದರು , ತಡರಾತ್ರಿ 11 ಗಂಟೆಯಿಂದ ಜಿಲ್ಲೆಯ ವಿವಿಧ ಪೊಲೀಸ್ ಉಪ ವಿಭಾಗಗಳಿಂದ ಬಂದಿದ್ದ ವಿಶೇಷ ಪೊಲೀಸ್ ತಂಡ ಗಳು ನಗರದಲ್ಲಿ ಮೀಟರ್ ಬಡ್ಡಿ ನಡೆಸುತ್ತಿದ್ದವರ ಮನೆ ಮೇಲೆ ದಾಳಿ ನಡೆಸಿ, ಕೆಲವರ ಮನೆಯಿಂದ ಬಡ್ಡಿ ವ್ಯವಹಾರ ಕುರಿತು ದಾಖಲಾತಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸುಮಾರು 15 ಕ್ಕೂ ವಾಹನಗಳಲ್ಲಿ ಬಂದಿದ್ದ ಪೊಲೀಸರು ಮುಂಡಗೋಡ ನಗರದಲ್ಲೆಲ್ಲಾ ಸುತ್ತಾಡಿ ಬಡ್ಡಿ ದಂಧೆ ನಡೆಸುವವರ ಇಂಚಿಂಚೂ ಮಾಹಿತಿ ಕಲೆಹಾಕಿದ್ದಾರೆ ಎಂದು ತಿಳಿದುಬಂದಿದೆ. ಮೀಟರ್ ಬಡ್ಡಿ ದಂಧೆಯಲ್ಲಿ ಮುಂಡಗೋಡ ನಗರದಲ್ಲಿ ಭಾರೀ ಸದ್ದು ಮಾಡಿರುವ ಹಾಗೂ ಸಾಕಷ್ಟು ಜನಾಕ್ರೋಶ ಹೊಂದಿರುವ ಕೆಲವು ಪ್ರಭಾವಿಗಳು, ದಾಳಿ ನಡೆಸುವ ಕೆಲ ದಿನಗಳ ಮುಂಚೆಯೇ ಊರು ಖಾಲಿ ಮಾಡಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಎಸ್ ಪಿ ಮಟ್ಟದಲ್ಲಿ ನಡೆದ ಇಷ್ಟು ದೊಡ್ಡ ಕಾರ್ಯಾಚರಣೆಯ ಮಾಹಿತಿ ಸೋರಿಕೆಯಾಗಿದೆಯಾ? ಎಂಬ ಸಂಶಯ ಪ್ರಜ್ಞಾವಂತರಲ್ಲಿ ಮೂಡುತ್ತಿದೆ, ಒಂದು ವೇಳೆ ಮಾಹಿತಿ ಸೋರಿಕೆ ಆಗಿದೆಯಾ ,ಸೋರಿಕೆ ಆದಲ್ಲಿ ಮಾಹಿತಿಯನ್ನು ಗುಪ್ತವಾಗಿಟ್ಟುಕೊಳ್ಳದೆ ಮೀಟರ್ ಬಡ್ಡಿ ದಂಧೆಕೋರರಿಗೇ ನೀಡಿದ್ದಾದರೂ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಮೀಟರ್ ಬಡ್ಡಿ ದಂಧೆ ಎಂಬುದೂ ಒಂದು ರೀತಿಯ ಪಿಡುಗು ಅಧಿಕ ಹಣದಾಸೆಗೆ ಅಮಾಯಕರನ್ನು ಹಿಂಸಿಸುವ , ದೌರ್ಜನ್ಯ ಮಾಡುವ ಮಟ್ಟಕ್ಕೆ ಬಡ್ಡಿ ದಂಧೆಕೋರರು ಮುಂಡಗೋಡದಲ್ಲಿ ಇಳಿದು ಬಿಟ್ಟಿದ್ದಾರೆ, ಮುಂಡಗೋಡಕ್ಕೆ ಈ ಪಿಡುಗು ವಕ್ಕರಿಸಲು ಹುಬ್ಬಳ್ಳಿ ನಂಟು ಹಾಗೂ ಮುಂಡಗೋಡದಲ್ಲಿ ರೌಡಿಸಂ ಚಟುವಟಿಕೆಗಳೇ ಪ್ರಮುಖ ಕಾರಣ. ಆದಷ್ಟು ಬೇಗ ಇವುಗಳಿಗೆ ಅಂತ್ಯ ಹಾಡದಿದ್ದಾರೆ ಮುಂದಿನ ದಿನಗಳಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.
