ಶಿರಸಿ : ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಅಂಗ ಸಂಸ್ಥೆಯಾಗಿರುವ ಯಲ್ಲಾಪುರದ ಶ್ರೀ ಗೋವರ್ಧನ (ರಿ.) ಗೋಶಾಲೆಯ ನಿಯೋಜಿತ ಹೊಸ ಕಟ್ಟಡ ಸ್ವರ್ಣ ನಂದಿನಿ ಗೋಸಂಸ್ಥಾನದ ಅಡಿಗಲ್ಲು ಸ್ಥಾಪನೆ ಕಾರ್ಯಕ್ರಮವು ದಿ-03-02-2025 ಸೋಮವಾರದ ಗೋಧೂಳಿ ಮುಹೂರ್ತದಲ್ಲಿ ಪರಮಪೂಜ್ಯ ಶ್ರೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ನೆರವೇರಿತು.
ಗೋಶಾಲೆಯ ಎಲ್ಲಾ ಗೋವುಗಳಿಗೆ ಪೂಜ್ಯ ಶ್ರೀಗಳು ಫಲಗ್ರಾಸ ನೀಡಿದರು. ಸೇರಿದ್ದ ಗೋಶಾಲೆಯ ಆಡಳಿತ ಸಮಿತಿಯ ಸದಸ್ಯರನ್ನು, ಗೋಶಾಲೆಯ ಎಲ್ಲಾ ದಾನಿಗಳನ್ನು, ಸಹಕಾರಿಗಳನ್ನು, ಗೋಸೇವಕರನ್ನು ಉದ್ದೇಶಿಸಿ ಆಶೀರ್ವಚನ ನೀಡಿ, ಗೋರಕ್ಷಣೆ ಎಂದರೆ ಧರ್ಮ ಸಂರಕ್ಷಣೆಯ ಇನ್ನೊಂದು ಮುಖವೇ ಆಗಿದೆ, ಭಾರತೀಯ ಗೋತಳಿಯ ಉಳಿವಿನಲ್ಲಿ ನಮ್ಮ ಉತ್ತಮ ಆರೋಗ್ಯ, ಯಶಸ್ವಿ ಸಾವಯವ ಕೃಷಿ ಅಡಗಿದೆ. ಉಳಿದಿರುವ ಅಮೂಲ್ಯ ಗೋ ತಳಿಗಳನ್ನು ಕಾಪಾಡಿಕೊಳ್ಳುವ ಜೊತೆಗೆ ಅನಾಥವೆನಿಸುವ ಎಲ್ಲಾ ಗೋವುಗಳಿಗೂ ಶ್ರೀ ಗೋವರ್ಧನ ಗೋಶಾಲೆ ಆಶ್ರಯ ತಾಣವಾಗಲಿ, ಸೀಮಾತೀತವಾಗಿ ಈ ಕಾರ್ಯಕ್ಕೆ ಹೆಚ್ಚಿನ ಸಹಕಾರ ಸಿಗುವಂತಾಗಲೆಂದು ಸುವರ್ಣ ಮಂತ್ರಾಕ್ಷತೆಯನ್ನು ಕೊಟ್ಟು ಆಶೀರ್ವದಿಸಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
