ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಇಂದು “ಕಾಯಕ ಶರಣ ಜಯಂತಿ” ಯನ್ನು ಅಚರಿಸಲಾಗಿದ್ದು, ತಹಶೀಲ್ದಾರರಾದ ಅಮರೇಶ ಜಿ ಕೆ ಇವರು ಕಾಯಕ ಶರಣರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಚಾಲನೆ ನೀಡಿ, 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಶರಣರ ಚಳುವಳಿ ನಡೆದಿದ್ದು, ಪ್ರತಿಯೊಬ್ಬ ವ್ಯಕ್ತಿ ಕಾಯಕ ನಿಷ್ಠೆ ಹೊಂದಿದ್ದು, ತಮ್ಮ ಕಾಯಕವನ್ನು ಕೀಳಾಗಿ ಕಾಣದೇ ಶ್ರದ್ಧೆಯಿಂದ ಮಾಡಿ ಅದರಲ್ಲೇ ಕೈಲಾಸವನ್ನು ಕಂಡರು. ಅನೇಕ ಬೆಳಕಿಗೆ ಬಾರದ ಕೆಳವರ್ಗದ ಶರಣರ ಪ್ರತಿನಿಧಿಗಳಾಗಿ ಇಂದು ಮಾದರ ಚನ್ನಯ್ಯ, ಮಾದಾರ ದೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಎನ್ನುವ 5 ಕಾಯಕ ಶರಣರ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಮೂಲಕ ಎಲ್ಲಾ ಕಾಯಕ ಶರಣರ ಆದರ್ಶವನ್ನು ನಾವು ಪಾಲಿಸಿಕೊಂಡು ಹೋಗಬೇಕಿದೆ ಎಂದರು.
ಜಿಲ್ಲಾ ಡಿಎಸ್ಎಸ್ ಮುಖಂಡರಾದ ತೆಗ್ಗಿನಕೇರಿ ಕೊಟ್ರೇಶ್ ಇವರು ಕುದುರೆ ಲಾಯದಲ್ಲಿ ಹುಲ್ಲುತರುವ ಕಾಯಕ ಮಾಡುತ್ತಿದ್ದ ಮಾದರ ಚನ್ನಯ್ಯ ಅಂಬಲಿಯನ್ನು ನೀಡಿ ಶಿವನನ್ನೇ ಮೆಚ್ಚಿಸಿ ಕಾರಣ ಎಂತಹ ಶ್ರೇಷ್ಠ ಭಕ್ತ ಎಂದು ಮೆಚ್ಚಿ ಕರಿಕಾಲ ಚೋಳರಾಜ ಶರಣಾಗಿ ಸತ್ಕರಿಸಿದ್ದ. ಅದೇ ರೀತಿ ಸಮಗಾರ ಹರಳಯ್ಯನಿಗೆ ಬಸವಣ್ಣನವರು ಶರಣು ಶರಣಾರ್ಥಿ ಎಂದು ನಮಿಸಿದ್ದಕ್ಕೆ ಒಂದು ಶರಣು ಹೆಚ್ಚಾಗಿ ಋಣಭಾರವಾಯಿತು ಎಂದು ಸಮಗಾರ ಹರಳಯ್ಯ ಮತ್ತು ಪತ್ನಿ ಇಬ್ಬರೂ ತಮ್ಮ ತೊಡೆಯ ಚರ್ಮವನ್ನು ಕತ್ತರಿಸಿ ಚಪ್ಪಲಿಗಳನ್ನು ಮಾಡಿ ಬಸವಣ್ಣನವರಿಗೆ ಅರ್ಪಿಸಿದ್ದರು. ಇವರ ಭಕ್ತಿಗೆ ಮೆಚ್ಚಿದ ಬಸವಣ್ಣ ಇವು ನಾನು ಮೆಡಲು ಯೋಗ್ಯವಲ್ಲ, ಕೂಡಲ ಸಂಗಮನಿಗೆ ಸಲ್ಲಬೇಕೆಂದು ತಲೆಮೇಲೆ ಹೊತ್ತುಕೊಂಡು ಕುಣಿದಿದ್ದರು. ಹೀಗೆ ಕೆಳ ವರ್ಗದವರಾದರೂ ಬಸವಣ್ಣನವರ ಪ್ರೇರಣೆ ಹೊಂದಿ ಮಹಾನ್ ಶರಣಗಾಗಿ ನಮಗೆಲ್ಲಾ ಬೆಳಕಾಗಿದ್ದಾರೆ ಎಂದರು.
ಜಿಲ್ಲಾ ಡಿಎಸ್ಎಸ್ ಮುಖಂಡರಾದ ಬದ್ದಿಮರಿಸ್ವಾಮಿ ಇವರು ಮನುಷ್ಯನ ಜಾತಿ ಪರಿಗಣಿಸದೇ ಆತ ಮಾಡುವ ಕಾಯಕಕ್ಕೆ ಮಹತ್ವಕೊಟ್ಟು, ಕಾಯಕ ಶರಣರ ಜಯಂತಿ ಎಂದು ಅಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಶರಣರು ಕಾಯಕಕ್ಕೆ ಮಹತ್ವ ನೀಡಿದಂತೆ ಪ್ರತಿಯೊಬ್ಬರೂ ತಮ್ಮ ತಮ್ಮ ಕಾಯಕವನ್ನು ನಿಷ್ಟೆಯಿಂದ ಮಾಡಿದರೆ ಅದೇ ಈ ಸಮಾಜಕ್ಕೆ ನೀಡುವ ಕೊಡುಗೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ಪ್ರತಿಭಾ.ಎಂ, ದಲಿತ ಮುಖಂಡರು, ಉಪತಹಶೀಲ್ದಾರ್ ಅನ್ನದಾನೇಶ್ ಬಿ ಪತ್ತಾರ್, ಕಂದಾಯ ನಿರೀಕ್ಷಕ ಹಾಲಸ್ವಾಮಿ, ಸಿಬ್ಬಂದಿ ದೇವರಾಜ ಅರಸು, ಗೌರಮ್ಮ, ಮಂಗಳ ಅರಮನೆ, ಮಂಜುನಾಥ, ಭೂಮಾಪನ ಕಛೇರಿ ಸಿಬ್ಬಂದಿ ಇದ್ದರು. ಸಿ ಮ ಗುರುಬಸವರಾಜ ಸ್ವಾಗತಿಸಿ ನಿರ್ವಹಿಸಿದರು.
