ಕಲಬುರಗಿ: ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರಕಾರಿ ಕೆಲಸದಲ್ಲಿ ಇದ್ದು, ಗುರತಿನ ಚೀಟಿ ಹಾಕಿಕೊಂಡು ಪ್ರತಿಭಟನೆ ಮಾಡಿರುವುದು ಕಾನೂನು ಬಾಹಿರವಾಗಿದ್ದು, ಸದರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕೂಡಲೇ ಆಮಾನತ್ತು ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಂದೀಪ ಭರಣಿ ನೇತೃತ್ವದಲ್ಲಿ ಮಹಾಗರ ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು
ದಿ. 12ರಂದು ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಾರ್ಡ್ ಸಂಖ್ಯೆ 4ರಲ್ಲಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಝೋನಾಲ್-3 ವಲಯ ಆಯುಕ್ತರು, ಇಸ್ಲಾಮಾಬಾದ ಕಾಲೋನಿಯಲ್ಲಿ ಶೌಚಾಲಯ ತೆರವುಗೊಳಿಸಲು ಹೋದಾಗ, ಮಹಾನಗರ ಪಾಲಿಕೆಯ ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳ ಕೊರಳು ಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ ಎಂದು ಆರೋಪಿಸಿ ಪಾಲಿಕೆ ಆಯುಕ್ತರಿಗೆ ಸದರಿ ಅಧಿಕಾರಿಗಳು ಮನವಿಯನ್ನು ಸಲ್ಲಿಸಿರುತ್ತಾರೆ.
ಆದರೆ ಘಟನೆ ಸಂಭವಿಸಿದ ದಿನವೇ ಸದರಿ ಅಧಿಕಾರಿಗಳು ಸಂಬಂಧಪಟ್ಟ ಪಾಲಿಕೆ ಆಯುಕ್ತರು ಅಥವಾ ಪೊಲೀಸ್ ಠಾಣೆಗೆ ದೂರು ನೀಡಬಹುದಾಗಿತ್ತು. ಆದರೆ ತಾವು ಯಾವುದೇ ರೀತಿಯ ಪ್ರಕರಣ ದಾಖಲು ಮಾಡದೇ ದಿ. 13 ರಂದು ಮಹಾನಗರ ಪಾಲಿಕೆಗೆ ಪ್ರತಿದಿನದಂತೆ ಕೆಲಸಕ್ಕೆ ಬಂದು ಪಂಚ್ ಮಾಡಿ ಪಾಲಿಕೆ ಕಚೇರಿ ಎದುರುಗಡೆ ಪ್ರತಿಭಟನೆ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದು ಅವರು ಆರೋಪಿಸಿದರು.
ಅದೇ ರೀತಿ ಕರ್ತವ್ಯದ ಮೇಲೆ ಇರುವಾಗ ಮತ್ತು ಸರಕಾರಿ ಕಛೇರಿಯ ಗುರುತಿನ ಚೀಟಿ ಹಾಕಿಕೊಂಡು ಹೋರಾಟ ಮಾಡಿರುವುದು ಮೂರ್ಖತನವಾಗಿದೆ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಅಧಿಕಾರಿಗಳಿಗೆ ನಾವೂ ಸಹ ಬೆಂಬಲ ನೀಡುತ್ತೇವೆ, ಆದರೆ ನೀವು ಸರಕಾರ ನೌಕರರಾಗಿರುವುದರಿಂದ ತಮ್ಮ ಕೆಲಸಕ್ಕೆ ರಜೆ ಹಾಕಿ ಹೋರಾಟ ಮಾಡಬೇಕಾಗಿತ್ತು, ಆದರೆ ನೀವು ಕೆಲಸಕ್ಕೆ ಹಾಜರಾಗಿ ಪಾಲಿಕೆ ಎದುರು ಹೋರಾಟ ಮಾಡಿ, ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಮನವಿ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದರು.
ಸರಕಾರಿ ಕೆಲಸದಲ್ಲಿ ಇದ್ದುಕೊಂಡು ಸರಕಾರಿ ಸಾರ್ವಜನಿಕರಿಗೆ ತೊಂದರೆ ನೀಡಿರುತ್ತಾರೆ. ಒಂದು ವೇಳೆ ನಿಮಗೆ ಅನ್ಯಾಯ ಆಗಿದ್ದರೆ, ರಜೆ ಪಡೆದುಕೊಂಡು ಹೋರಾಟ ಮಾಡಿ ತೊಂದರೆ ಇರುವುದಿಲ್ಲ, ಅದಕ್ಕೆ ನಮ್ಮ ಅಭ್ಯಂತರವಿರುವುದಿಲ್ಲ. ಆದರೆ ಕೆಲಸದ ಮೇಲೆ ಇದ್ದಾಗ ಹೋರಾಟ ಮಾಡುವುದು ಕಾನೂನಿನ ಪ್ರಕಾರ ತಪ್ಪಾಗಿರುತ್ತದೆ. ಆದ್ದರಿಂದ ಸದರಿ ಹೋರಾಟದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಂಡು ಇವರನ್ನು ಕರ್ತವ್ಯದಿಂದ ಅಮಾನತ್ತು ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಜಯ ಟೆಂಗೆ, ವೀರೇಶ ಬರನ್, ಸತೀಶ ಕಡೂನ, ಪರ್ವತ ಪುಟಗಿ, ಪಪ್ಪು ಬಿದ್ದಾಪೂರ, ಶಾಂತು ಡೊಣ್ಣೂರ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಇದ್ದರು.
