ನೋಡು ಬಾ
ಕಣ್ತೆರೆದು ನೋಡು ಬಾ,
ನಡೆದಾಡುವ ದೇವರ
ನೀನೊಮ್ಮೆ ನೋಡು ಬಾ.
ಅಂಧ ಗುರುವನ್ನು ಪಡೆದ ಶಿಷ್ಯ
ತಾನಂಧನಿದ್ದೂ ಬೆಳಗಿಸಿದ,
ಸಂಗೀತ ಪ್ರಪಂಚವ, ಅದರಲಿ
ಮಿನುಗುವ ಅಪಾರ ನಕ್ಷತ್ರಗಳ
ನೀನೊಮ್ಮೆ ನೋಡು ಬಾ.
ಪುಣ್ಯಾಶ್ರಮದ ಭಾರ ಹೊತ್ತ
ತರುಳ ಪುಟ್ಟರಾಜ,
ಅಂಧ-ಅನಾಥರ ಕಾಳಜಿಯಲ್ಲಿ
ಶಿವನನ್ನು ಕಂಡಿದ್ದು,
ನೀನೊಮ್ಮೆ ನೋಡು ಬಾ.
ಅಧಿಕಾರ, ಉಡುಗೆ – ತೊಡುಗೆಯ
ವ್ಯಾಮೋಹ ಇಲ್ಲದವರ,
ಸದಾ ಭಕ್ತರ ಸಂತಸದಲ್ಲಿಯೇ,
ಆತ್ಮತೃಪ್ತಿ ಕಂಡವರ
ನೀನೊಮ್ಮೆ ನೋಡು ಬಾ.
ಸಂಗೀತ-ಸಾಹಿತ್ಯ ಆಧ್ಯಾತ್ಮದಲ್ಲಿ
ತೋರಿದ ಸಾಧನೆಯ,
ನವರಸ ಮೇಳೈಸಿ ವಾದ್ಯ ಬಳಸಿ
ಪ್ರವಚನ ನೀಡಿದವರ,
ನೀನೊಮ್ಮೆ ನೋಡು ಬಾ.
ಉಭಯ ಗಾಯನ ವಿಶಾರದ
ಪಂಚಾಕ್ಷರ ವಾಣಿಯ ಚಾಲಕ,
ಸಕಲ ವಾದ್ಯ ಕಂಠೀರವ
ತ್ರಿಭಾಷಾ ಕವಿರತ್ನ ಧುರೀಣರ,
ನೀನೊಮ್ಮೆ ನೋಡು ಬಾ.
ಅಗಣಿತ ಪ್ರಶಸ್ತಿ-ಪುರಸ್ಕಾರ,
ತುಲಾಭಾರಗಳ ಚಕ್ರವರ್ತಿಯ
ಗದುಗಿನ ಗಾನಯೋಗಿ
ಪಂಡಿತ ಶ್ರೀ ಪುಟ್ಟಯ್ಯಜ್ಜನ
ನೀನೊಮ್ಮೆ ನೋಡು ಬಾ
ನೋಡು ಬಾ
ಕಣ್ತೆರೆದು ನೋಡು ಬಾ
ನಡೆದಾಡುವ ದೇವರ
ನೀನೊಮ್ಮೆ ನೋಡು ಬಾ.

✍️ ಬಸವರಾಜ ಐಲಿ, ಶಿಕ್ಷಕರು
ಸ.ಮಾ.ಹಿ.ಪ್ರಾ.ಶಾಲೆ , ಹುಲಿಹೈದರ. 8197511245.
