ನೀರಿನ ಗುಣಮಟ್ಟ ಕುರಿತ ವರದಿ ಹಿನ್ನೆಲೆ : ಎಚ್ಚೆತ್ತ ಪಟ್ಟಣ ಪಂಚಾಯ್ತಿಯಿಂದ ನೀರು ಪರೀಕ್ಷೆ
ಉತ್ತರ ಕನ್ನಡ/ ಮುಂಡಗೋಡ : ನಗರದ ಹೈಸ್ಕೂಲ್ ಒಂದಕ್ಕೆ ಪೂರೈಕೆಯಾಗುತ್ತಿರುವ ಮಕ್ಕಳ ಕುಡಿಯುವ ನೀರು ಗುಣಮಟ್ಟದಿಂದ ಕೂಡಿಲ್ಲ ಎಂಬ ‘ಕರುನಾಡ ಕಂದ’ ಪತ್ರಿಕೆಯ 1-3-2025 ರ ಸಂಚಿಕೆಯಲ್ಲಿ ಪ್ರಕಟವಾದ ವಿಸ್ತೃತ ವರದಿಯ ಬೆನ್ನಲ್ಲೇ ಎಚ್ಚೆತ್ತ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಮುಂಡಗೋಡ ನಗರ ಭಾಗದಲ್ಲಿರುವ , ಪಟ್ಟಣ ಪಂಚಾಯ್ತಿ ಯಿಂದ ನಿರ್ವಹಣೆ ಮಾಡಲಾಗುವ ಶುದ್ಧ ಕುಡಿಯುವ ನೀರಿನ ಘಟಕಗಳ ನೀರನ್ನು ಹಾಗೂ ಪಟ್ಟಣ ಪಂಚಾಯ್ತಿ ವತಿಯಿಂದ ಮನೆಗಳಿಗೆ ನಲ್ಲಿ ಗಳ ಮೂಲಕ ಪೂರೈಕೆಯಾಗುವ ನೀರನ್ನು ಲ್ಯಾಬ್ ಪರೀಕ್ಷೆಗೆ ಕಳಿಸುವ ಮೂಲಕ ಮುನ್ನೆಚ್ಚರಿಕಾ ಕ್ರಮವನ್ನು ಅನುಸರಿಸಿದೆ.
ಬೋರ್ ಮೂಲಕ ಕೆಲವೆಡೆ ಪೂರೈಕೆಯಾಗುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರಬಹುದು ಎಂಬ ಹಿನ್ನೆಲೆಯಲ್ಲಿ , ಒಟ್ಟಾರೆ ನಗರದ 5 ನೀರು ಶುದ್ಧೀಕರಣ ಘಟಕಗಳು ಸೇರಿದಂತೆ ಒಟ್ಟು 8 ಕಡೆಗಳಲ್ಲಿನ ನೀರಿನ ಸ್ಯಾಂಪಲ್ ಲ್ಯಾಬ್ ಗೆ ಕಳಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ ಕರುನಾಡ ಕಂದ ವರದಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರದಿ – ಶಿವರಾಜ್ ಶಿರಾಲಿ