ಬಳ್ಳಾರಿ/ : ಕಂಪ್ಲಿ ಗ್ಯಾರಂಟಿ ಯೋಜನೆಗಳು ಬಡವರ ಹಾಗೂ ಮಧ್ಯಮ ವರ್ಗದ ಜನರ ಬದುಕಿಗೆ ಆಸರೆಯಾಗಿವೆ ಎಂದು ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಹೇಳಿದರು.
ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಪಂ, ತಾ.ಪಂ, ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ನೇತೃತ್ವದಲ್ಲಿ ಬುಧವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಚುನಾವಣೆ ವೇಳೆ ನೀಡಿದ ಆಶ್ವಾಸನೆಯಂತೆ ರಾಜ್ಯ ಸರ್ಕಾರವು ಶಕ್ತಿ ಯೋಜನೆ, ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳನ್ನು ನೀಡುವ ಮೂಲಕ ನುಡಿದಂತೆ ನಡೆಯುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅಧಿಕಾರಿಗಳು ಜಾರಿಗೊಳಿಸಿ ಅರ್ಹರಿಗೆ ಯೋಜನೆ ದೊರೆಯುವಂತೆ ಶ್ರಮಿಸಬೇಕು ಎಂದರು.
ನಂತರ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಆರ್.ಕೆ.ಶ್ರೀಕುಮಾರ ಮಾತನಾಡಿ, ರಾಜ್ಯ ಸರ್ಕಾರದ ಪ್ರತಿಯೊಬ್ಬರು ಯೋಜನೆಗಳನ್ನು ಅರ್ಹ ಕುಟುಂಬಗಳಿಗೆ ಸಕಾಲದಲ್ಲಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಶೇ.99% ಯೋಜನೆಗಳನ್ನು ಜನತೆಗೆ ಮುಟ್ಟಿಸಲಾಗಿದೆ ಎಂದರು.
ಯುವನಿಧಿ ಯೋಜನೆಯು ಕೆಲ ನಿರುದ್ಯೋಗಿಗಳಿಗೆ ದೊರಕುತ್ತಿಲ್ಲ. ಹೊಸದಾಗಿ ಅರ್ಜಿ ಹಾಕುವ ಯುವಕರಿಗೆ ಸಮಸ್ಯೆಯಾಗುತ್ತಿದೆ ಎಂಬ ಅರೋಪಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ (ಯುವನಿಧಿ)ಯ ಜಿಲ್ಲಾ ಸಮಾಲೋಚನಾ ತರಬೇತುದಾರ ವೆಂಕಟೇಶ ಇವರು ಪ್ರತಿಕ್ರಿಯಿಸಿ, ರಾಜ್ಯಾದ್ಯಾಂತ ತಾಂತ್ರಿಕ ದೋಷದಿಂದ ಸಮಸ್ಯೆಯಾಗಿದ್ದು, ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿದೆ. ನಮ್ಮಲ್ಲಿ ಇದ್ದರೆ, ಸಮಸ್ಯೆ ಈಡೇರಿಸಲಾಗುವುದು ಎಂದು ಸ್ಪಷ್ಟಪಡಿಸುವ ಜತೆಗೆ ಕಂಪ್ಲಿ ತಾಲೂಕಿನಲ್ಲಿ 686 ಜನ ನಿರುದ್ಯೋಗಿ ಯುವಕರಿಗೆ ಸುಮಾರು 71,59,500 ರೂ. ಮುಟ್ಟಿದೆ ಎಂದು ತಿಳಿಸಿದರು.
ಕಂಪ್ಲಿ ತಾಲೂಕಿನಲ್ಲಿ ಅಂತೋದಯ 2753, ಬಿಪಿಎಲ್ 26080 ಮತ್ತು ಎಪಿಎಲ್ 4550 ಸೇರಿದಂತೆ ಒಟ್ಟು 33380 ಪಡಿತರ ಚೀಟಿಗಳಿದ್ದು, ಸಾಕಷ್ಟು ಕುಟುಂಬಗಳು ಅನ್ಯಭಾಗ್ಯ ಯೋಜನೆ ಪಡೆಯುತ್ತಿದ್ದಾರೆ. ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಮಾತ್ರ ಹೊಸ ಕಾರ್ಡ್ ಹಾಕಲು ಅವಕಾಶವಿದೆ. ಆದರೆ, ಉಳಿದ ಕುಟುಂಬಗಳಿಗೆ ಹೊಸ ಕಾರ್ಡ್ ನೀಡುವ ಸಂಬಂಧ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಆಹಾರ ನಿರೀಕ್ಷಕ ವಿರುಪಾಕ್ಷಗೌಡ ವರದಿ ಮಂಡಿಸಿದರು.
ಕಂಪ್ಲಿ ತಾಲೂಕಿನಲ್ಲಿ 2023ರ ಆಗಸ್ಟ್ ತಿಂಗಳಿಂದ 2024ರ ಸೆಪ್ಟಂಬರ್‌ವರೆಗಿನ ಸುಮಾರು 345297 ಫಲಾನುಭವಿಗಳು ಸುಮಾರು 69.05 ಕೋಟಿ ರೂ.ಗಳ ಗೃಹಲಕ್ಷ್ಮಿ ಭಾಗ್ಯ ಪಡೆದಿದ್ದಾರೆ ಎಂದು ಎಸಿಡಿಪಿಒ ಮೋಹನ್ ಎಸ್.ಕಾಳಾಚಾರ ಅವರು ಹೇಳಿದರು.
ಸಾಕಷ್ಟು ಕುಟುಂಬಗಳು ಗೃಹಜ್ಯೋತಿ ಯೋಜನೆಯ ಸದುಪಯೋಗಪಡಿಸಿಕೊಂಡಿದ್ದಾರೆ ಎಂದು ಕಂಪ್ಲಿ ಜೆಸ್ಕಾಂ ಎಇಇ ಮಲ್ಲಿಕಾರ್ಜುನಗೌಡ ತಿಳಿಸಿದರು. ಕಂಪ್ಲಿ ತಾಲೂಕಿನಿಂದ 3906807 ಜನ ವಯಸ್ಕ ಮಹಿಳೆಯರು ಹಾಗೂ 146276 ಮಕ್ಕಳು ಸೇರಿದಂತೆ ಒಟ್ಟಾರೆ 4053083 ಜನ ಮಹಿಳೆಯರು ಶಕ್ತಿ ಯೋಜನೆ ಪಡೆದಿದ್ದು, ಸುಮಾರು 171950198 ರೂ.ಗಳ ಆದಾಯ ಬಂದಿದೆ ಎಂದು ಕುರುಗೋಡು ಡಿಪೋ ಮ್ಯಾನೇಜರ್ ಚಂದ್ರಶೇಖರ ತಿಳಿಸಿದರು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲನಗೌಡ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸದಸ್ಯರಾದ ಶಿವಕುಮಾರ, ಶಿವರಾಜಕುಮಾರ, ವಿ.ರಮೇಶ, ಮಂಜುನಾಥ, ಗೌಡ್ರು ಕೆ.ಸಿದ್ದಪ್ಪ, ವೀರಭದ್ರಗೌಡ, ಶೇಖರಿ, ಕರಿಯಪ್ಪ, ವಿರೇಶ, ರಾಜಾಭಕ್ಷಿ, ಲಕ್ಷ್ಮೀ ಕಾಂತ, ತಿಮ್ಮಪ್ಪ, ರೇಣುಕಮ್ಮ, ವಿಜಯಲಕ್ಷ್ಮಿ ಸೇರಿದಂತೆ ಇಲಾಖೆ ಸಿಬ್ಬಂದಿಗಳು ಇದ್ದರು.
ವರದಿ: ಜಿಲಾನ್ ಸಾಬ್ ಬಡಿಗೇರ್