ಬಾಗಲಕೋಟೆ/ ಹುನಗುಂದ: ಹಬ್ಬ ಜಾತ್ರೆ ಉತ್ಸವಗಳು ಏಕತೆಯ ಸಂಕೇತ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಕ್ಷರಸ್ಥ ಕವಿ ಸಿದ್ದಪ್ಪ ಬಿದರಿ ಅಭಿಪ್ರಾಯಪಟ್ಟರು. ಅವರು ಹುನಗುಂದ ತಾಲೂಕಿನ ಹಿರೇಮಾಗಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಮುಗ್ದ ಹಳ್ಳಿಯ ಜನರು ರಾಜಕೀಯವನ್ನು ಅತಿಯಾಗಿ ತಲೆಗೆ ಹಚ್ಚಿಕೊಳ್ಳದೆ ಚುನಾವಣೆಗೆ ಸೀಮಿತಗೊಳಿಸಿಕೊಂಡು ಮತ್ತೆ ಎಂದಿನಂತೆ ಒಂದಾಗಿ ಜೀವನ ನಡೆಸಬೇಕು. ನಮ್ಮ ದಿನ ನಿತ್ಯದ ಕಷ್ಟ ನಷ್ಟಗಳಿಗೆ ಹೆಗಲು ಕೊಡುವವರು ನಮ್ಮ ನೆರೆಹೊರೆಯವರೇ ಹೊರತು ಅಧಿಕಾರಸ್ಥ ರಾಜಕಾರಣಿಗಳಲ್ಲ ಎಂದರು.
ಟಿವಿ, ಮೊಬೈಲುಗಳಿಂದ ಮೌಲ್ಯಗಳು ಕಡಿಮೆಯಾಗುತ್ತಿವೆ, ಕೂಡು ಕುಟುಂಬಗಳು ಛಿದ್ರಗೊಳ್ಳುತ್ತಿವೆ, ಗಂಡ ಹೆಂಡತಿ, ಅತ್ತೆ ಸೊಸೆಯರ ಸಹ ಸಂಬಂಧಗಳು ಮುರಿದು ಬೀಳುತ್ತಿವೆ, ಹೆಣ್ಣುಮಕ್ಕಳು ಮಕ್ಕಳು ಸುಶಿಕ್ಷಿತರಾಗಿ ಸೌಹಾರ್ದತೆ ನೆಲೆಸುವಂತಾಗಲಿ ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಮೀನಗಡ ಪಿಎಸ್ಐ ಜ್ಯೋತಿ ವಾಲಿಕಾರ ಮಾತನಾಡುತ್ತಾ ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ನೀಡುವ ಅಗತ್ಯವಿದೆ. ಪಾಲಕ ಪೋಷಕರ ಅತಿಯಾದ ಪ್ರೀತಿ ಮಕ್ಕಳನ್ನು ಮೊಂಡುತನಕ್ಕೆ ದೂಡುತ್ತದೆ, ಮಕ್ಕಳು ತಪ್ಪು ಮಾಡಿದಾಗ ಹೆತ್ತವರು ತಿದ್ದಿ ಬುದ್ದಿ ಹೇಳಬೇಕು. ಇಲ್ಲವಾದರೆ ಮುಗ್ಧ ಮಕ್ಕಳು ತಾವು ಮಾಡಿದ್ದೇ ಸರಿ ಎಂಬ ಮನೋಭಾವ ತಾಳಿ ಮುಂದೆ ಸಮಾಜದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರವೀಣ್ ವಾಲೀಕಾರ ಮಾತನಾಡಿ, ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದುತ್ತಿರುವುದು ಆಶಾದಾಯಕ ಬೆಳವಣಿಗೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸರಕಾರಿ ಶಾಲಾ ಮಕ್ಕಳು ಗಣನೀಯ ಸಾಧನೆ ಮಾಡುತ್ತಿರುವುದು ಮಾಧ್ಯಮಗಳ ವರದಿಯಿಂದ ತಿಳಿದು ಬರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಮಕ್ಕಳ ಕಲಿಕೆಯ ಗುಣಮಟ್ಟವು ಉತ್ತಮವಾಗಿದ್ದು ಇಲ್ಲಿನ ಶಿಕ್ಷಕ ವರ್ಗದ ಶ್ರಮ ಶ್ಲಾಘನೀಯ ಎಂದರು.
ಕಳೆದ 25 ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಗ್ರಾಮದಲ್ಲಿ ಸೇವೆ ಮಾಡುತ್ತಿರುವ ಕಾಯಕ ಜೀವಿಗಳಾದ ಕಮಲಪ್ಪ ನಾಯಕ, ಮರಿಯಪ್ಪ ಹೊಸೂರ, ಕಾಳಪ್ಪ ಬಡಿಗೇರ, ಕಮಲಮ್ಮ ದಾಸರ ಹಾಗೂ ಹಲವಾರು ದಾನಿಗಳನ್ನು ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಗ್ರಾಮ ಪಂಚಾಯತಿ ಅಧ್ಯಕ್ಷೆ ನೀಲವ್ವ M ಹುಲ್ಲಿಕೇರಿ, ಪ್ರೌಢಶಾಲಾ ಮುಖ್ಯ ಗುರು ಪಿ.ಎಚ್.ಪವಾರ, ನಾಗಣ್ಣ ಬಾದವಾಡಗಿ, ಸುರೇಶ ರಾಠೋಡ, ಶಂಕ್ರಪ್ಪ ಮೇಟಿ, ಮೌಲಾಸಾಬ ಚಪ್ಪರಬಂದ, ರಾಮನಗೌಡ ಕೆಸರಪೆಂಟಿ, ರಮೇಶ ಚಿತ್ತರಗಿ, ಶಿವಪ್ಪ ಕಟ್ಟಿಮನಿ, ಪಾಪಣ್ಣ ಹೂಗಾರ, ಮುಖ್ಯಗುರು ಗುರುರಾಜ ರಜಪೂತ, ಸಿಆರ್ ಪಿ ಮಹಾಂತೇಶ ಹುಲ್ಯಾಳ, ಉಪಸ್ಥಿತರಿದ್ದರು. ಮಹೇಶ ಮಾಶ್ಯಾಳ, ರಾಘವೇಂದ್ರ ವಂದಗನೂರ ನಿರೂಪಿಸಿದರು. ಸಿ ಟಿ ಪೂಜಾರಿ ವಂದಿಸಿದರು.
- ಕರುನಾಡ ಕಂದ