ಬಾಗಲಕೋಟೆ/ ಹುನಗುಂದ : ವಿದ್ಯಾರ್ಥಿಗಳಲ್ಲಿರುವ ಅಂತರಂಗದ ಅರಿವಿಗೆ ಹೊಸ ಸ್ಪರ್ಶ ನೀಡುವ ಶಿಕ್ಷಕ ವಿದ್ಯಾರ್ಥಿಗಳ ಬದುಕಿನ ಮಾರ್ಗದರ್ಶಕನೂ ಆಗಿರುತ್ತಾನೆ ಎಂದು ಗುರುಮಹಾಂತ ಶ್ರೀಗಳು ಅಭಿಪ್ರಾಯ ಪಟ್ಟರು.
ಇಲ್ಲಿನ ವಿಜಯ ಮಹಾಂತೇಶ ಪ್ರೌಢಶಾಲೆಯ 1981-82 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ವಿಜಯ ಮಹಾಂತೇಶ ಸಭಾಭವನದಲ್ಲಿ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ತಂದೆ – ತಾಯಿ ಮಗುವಿಗೆ ಜನ್ಮ ನೀಡಿದರೆ ಗುರು ತಮ್ಮಲ್ಲಿರುವ ಜ್ಞಾನವನ್ನು ಧಾರೆ ಎರೆದು ಶಿಷ್ಯರನ್ನು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳನ್ನಾಗಿ ರೂಪಿಸುವ ಮಹಾನ್ ಸಂತರಾಗಿರುತ್ತಾರೆ. ಧರ್ಮಾತೀತ, ಸೀಮಾತೀತವಾಗಿ ಮೇಲ್ಮಟ್ಟದ ಸ್ಥಾನ ಹೊಂದಿರುವ ಗುರು ಸದಾ ಸ್ಮರಣೀಯರಾಗಿರುತ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಅವರು ಅಕ್ಷರ ಮತ್ತು ಸಂಸ್ಕಾರ ಕಲಿಸುವ ಶಿಕ್ಷಕನಿಗೆ ಸಮಾಜದಲ್ಲಿ ಎಲ್ಲಾ ಕಾಲಕ್ಕೂ ಉನ್ನತ ಸ್ಥಾನಮಾನಗಳಿವೆ, ಮೌಲ್ಯಗಳು ಅಪಮೌಲ್ಯವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲೂ ಕಲಿಸಿದ ಗುರುವನ್ನು ಗುರುತಿಸಿ ಗೌರವಿಸುವ ಈ ಪರಂಪರೆ ಮಾದರಿಯಾದುದು ಎಂದರು.
ಅತಿಥಿಗಳಾಗಿ ಮಾತನಾಡಿದ ವಿ.ಮ.ವಿ.ವ ಸಂಘದ ಗೌರವ ಕಾರ್ಯದರ್ಶಿಗಳಾದ ಡಾ.ಮಹಾಂತೇಶ ಕಡಪಟ್ಟಿಯವರು ಉದಾತ್ತ ಆಲೋಚನೆ, ವಿದ್ಯಾರ್ಥಿಗಳ ಶ್ರೇಯಸ್ಸು ಮತ್ತು ವೃತ್ತಿಯನ್ನು ಗೌರವಿಸುವ ಶಿಕ್ಷಕರು ಸದಾ ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದರು.
ಇದೇ ಸಂದರ್ಭದಲ್ಲಿ ವಿದ್ಯೆ ಕಲಿಸಿದ ಗುರುಗಳು, ಸಿಬ್ಬಂದಿ ವರ್ಗದವರನ್ನು ಮತ್ತು ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಎಂ. ಎನ್. ತೆನಹಳ್ಳಿ ಮತ್ತು ಎ.ಓ.ಬಿರಾದಾರ ಮಾತನಾಡಿದರು. 1981-82 ಸಾಲಿನ ಗುರುವೃಂದ, ಸಿಬ್ಬಂದಿ ವರ್ಗ, ಡಾ. ಬಸವಲಿಂಗ ಶ್ರೀಗಳು ವೇದಿಕೆಯಲ್ಲಿದ್ದರು.
ವಿ.ಮ.ಸಂಸ್ಥೆಯ ನಿರ್ದೇಶಕರು ಸಂಸ್ಥೆಯ ಅಂಗ ಸಂಸ್ಥೆಗಳ ಸಿಬ್ಬಂದಿ ವರ್ಗ , ಸ್ನೇಹ ಬಳಗದ ಕಾರ್ಯಕಾರಿ ಹಾಗೂ ಸಲಹಾ ಸಮಿತಿಯ ಸದಸ್ಯರು, ಸ್ನೇಹ ಬಳಗದ ಸರ್ವ ಸದಸ್ಯರು
ಉಪಸ್ಥಿತರಿದ್ದರು.
ವಿನಯ ಹರಿಹರ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯರಾದ ಬಸವರಾಜ ಬನ್ನಟ್ಟಿ ಸ್ವಾಗತಿಸಿದರು.
ಸ್ನೇಹ ಬಳಗದ ಗೌರವಾಧ್ಯಕ್ಷ ಬಸವರಾಜ ಕಡಪಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿವೃತ್ತ ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಪರಿಚಯಿಸಿದರು.
ನಿವೃತ್ತ ಶಿಕ್ಷಕ ಸಂಗಣ್ಣ ಹುಂಡೇಕಾರ ಮತ್ತು ಉಪನ್ಯಾಸಕಿ ನಾಗರತ್ನ ಭಾವಿಕಟ್ಟಿ ನಿರೂಪಿಸಿದರು. ಸ್ನೇಹ ಬಳಗದ ಗೌರವಾಧ್ಯಕ್ಷ ಈಶ್ವರ ಗಡ್ಡಿ ವಂದಿಸಿದರು.
- ಕರುನಾಡ ಕಂದ