ಶಿವಮೊಗ್ಗ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದ ಮೇರೆಗೆ ರಾಜಿಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಇತ್ಯರ್ಥಪಡಿಸಲು ‘ಲೋಕ ಅದಾಲತ್’ ಕಾರ್ಯಕ್ರಮವನ್ನು ಮಾ. 8 ರ ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯಲ್ಲಿ ನಡೆಯಲಿದ್ದು, ಪಕ್ಷಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಮನವಿ ಮಾಡಿದರು.
ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ‘ಲೋಕ ಅದಾಲತ್’ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಲೋಕ್ ಅದಾಲತ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್ ಬೌನ್ಸ್, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು ಹಾಗೂ ಕಲಂ 6 ಹಿಂದೂ ವಾರಸು ಕಾಯ್ದೆಗೆ ಸಂಬಂಧಿಸಿದಂತೆ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವು ವಿನೀತ ಶರ್ಮ ವಿರುದ್ಧ ರಾಕೇಶ್ ಶರ್ಮ ಮತ್ತು ಇತರರು ಪ್ರಕರಣದಲ್ಲಿ ದಿನಾಂಕ 11.08.2020 ರಂದು ನೀಡಿರುವ ತೀರ್ಪಿನನ್ವಯ ಹೆಣ್ಣು ಮಕ್ಕಳಿಗೂ ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಸಮ ಪಾಲಿಗೆ ಸಂಬಂಧಿಸಿದ್ದು, ವಿಭಜನಾ ಪ್ರಕರಣಗಳು ಹಾಗೂ ಇತರೆ ಪ್ರಕರಣಗಳನ್ನು ಗುರುತಿಸಿ, ಈ ಪ್ರಕರಣಗಳ ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ಅವರ ಒಪ್ಪಿಗೆಯ ಪ್ರಕಾರ ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥ ಮಾಡಲಾಗುವುದು.
ದಿ: 14-12-2024 ರಂದು ನಡೆದ ಲೋಕ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರುಗಳು, ನ್ಯಾಯವಾದಿಗಳು, ವಿಮೆ ಕಂಪನಿಯ ಅಧಿಕಾರಿಗಳು, ಪ್ಯಾನಲ್ ವಕೀಲರುಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರದಿಂದ 15,383 ಪ್ರಕರಣಗಳನ್ನು ಗುರುತಿಸಲಾಗಿದ್ದು, ಈಗಾಗಲೇ ಅವುಗಳ ಪೈಕಿ 13393 ವಿಲೇವಾರಿಗೊಂಡಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ನಮ್ಮ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿನ ಬಾಕಿ ಇರುವ ಪ್ರಕರಣಗಳ ಒಟ್ಟು ಸಂಖ್ಯೆ 50 ಸಾವಿರ ಇದ್ದು, ಅವುಗಳ ಪೈಕಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳ ವತಿಯಿಂದ ಒಟ್ಟು 15 ಸಾವಿರ ಪ್ರಕರಣಗಳನ್ನು ದಿ. 08.03.2025 ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ಗಾಗಿ ಗುರುತಿಸಲಾಗಿದ್ದು, ಇತ್ಯರ್ಥಗೊಳಿಸಲಾಗುತ್ತದೆ. ಹಾಗೂ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಆ ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ಚಾಲ್ತಿಯಲ್ಲಿರುತ್ತದೆ ಎಂದರು.
ಇದರಲ್ಲಿ ಕೌಟುಂಬಿಕ ಪ್ರಕರಣಗಳಿಗೆ ಹೆಚ್ಚಿನ ಇತ್ತು ನೀಡಲಾಗಿದ್ದು, ವೈಯಕ್ತಿಕ ಕಾರಣಗಳಿಂದ ಹಾಗೂ ಮನಸ್ತಾಪದಿಂದ ದೂರ ಉಳಿದಿರುವ ಗಂಡ ಹೆಂಡತಿಯರ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುತ್ತದೆ. ಇದಕ್ಕೆಂದೆ ಸುಮಾರು ಒಂದು ತಿಂಗಳಿನಿಂದ ಸಂಧಾನ ಕ್ರಿಯೆಯನ್ನು ನಡೆಸುತ್ತಿದ್ದೇವೆ, ಮಧ್ಯಸ್ಥಿಕೆ ಸೆಂಟರ್ ಕೂಡಾ ಮಾಡಿದ್ದು, ಆಪ್ತ ಸಮಾಲೋಚಕರ ಮೂಲಕ ಅವರ ಕೌಟುಂಬಿಕ ಪ್ರಕರಣದಲ್ಲಿ ಮಧ್ಯಸ್ಥಿತಿಕೆ ವಹಿಸಿ ವಿವಾದವನ್ನು ಬಗೆಹರಿಸಲಾಗುತ್ತದೆ ಇದಲ್ಲದೆ ಪಾಲು ವ್ಯಾಜ್ಯ ಹಾಗೂ ಆಸ್ತಿ ವಿವಾದಗಳ ಪ್ರಕರಣಗಳು ಹೆಚ್ಚಾಗಿದ್ದು, ಬಗೆಹರಿಸಲಾಗುತ್ತದೆ. ಸುಮಾರು 15 ರಿಂದ 20 ವರ್ಷಗಳ ಪ್ರಕರಣಗಳನ್ನು ರಾಜಿ ಸಂಧಾನ ಮಾಡಲಿದ್ದು, ಪ್ರಕರಣಗಳ ಸಂಧಾನದಲ್ಲಿ ಲೋಕ ಅದಾಲತ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಅದರ ವಿರುದ್ಧ ಮತ್ತೆ ಮೇಲ್ಮನವಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಇದಲ್ಲದೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕಾಲಕಾಲಕ್ಕೆ ಕಾನೂನು ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಿ ಎಲ್ಲಾ ವರ್ಗದ ಜನರಿಗೆ ಸಂಬಂಧಪಟ್ಟಂತಹ ಕಾನೂನುಗಳ ಅರಿವು ಮೂಡಿಸುವುದು ಮತ್ತು ಅವಶ್ಯಕ ವ್ಯಕ್ತಿಗಳಿಗೆ ನೆರವನ್ನು ಸಹ ಕೊಡುವಂತಹ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿದೆ ಎಂದರು.
ಸ೦ಧಾನಕ್ಕೆ ಮಹಿಳಾ ವಕೀಲರಿಗೆ ಮಾನ್ಯತೆ:
ಮಾ.8 ರಂದು ರಾಷ್ಟ್ರೀಯ ಮಹಿಳಾ ದಿನಾಚರಣೆ ಇರುವುದರಿಂದ ಅಂದೇ ಲೋಕ್ ಅದಾಲತ್ ನಡೆಯುತ್ತಿದ್ದು, ಜಿಲ್ಲಾ ನ್ಯಾಯಾಲಯವು ಮಹಿಳಾ ಗೌರವ ಸಮರ್ಪಣೆಗಾಗಿ ಎಲ್ಲಾ ಪ್ರಕರಣಗಳ ಸಂಧಾನಕ್ಕೆ ಮಹಿಳಾ ವಕೀಲರನ್ನು ನೇಮಿಸಲಾಗಿದೆ.
ತಾಲ್ಲೂಕು ಒಳಗೊಂಡಂತೆ ಒಟ್ಟು 38 ಬೆಂಜ್‌ಗಳನ್ನು ಸಿದ್ದಪಡಿಸಿದ್ದು, ಮಹಿಳಾ ವಕೀಲರಿಗೆ ಮಾನ್ಯತೆ ನೀಡಿಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್. ಸಂತೋಷ್ ಕುಮಾರ್ ಪಾಲ್ಗೊಂಡಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ