ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿರುವ ಶ್ರೀ ಬಲಕುಂದೆಪ್ಪ ತಾತನವರ ಜಾತ್ರ ಮಹೋತ್ಸವದ ಅಂಗವಾಗಿ ಇಂದು ಸಂಜೆ ತಾತನವರ 11ನೇ ವರ್ಷದ ಮಹಾರಥೋತ್ಸವವು ಕಂಪ್ಲಿ ಭಾಗದಲ್ಲಿ ಹಾಲುಮತ ಸಮಾಜದವರ ಅತ್ಯಂತ ದೊಡ್ಡ ಜಾತ್ರಾಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಇಂದು ಸಂಜೆ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಹಾಲುಮತ ಸಮಾಜದ ಸದ್ಭಕ್ತರ ಮನೆಗಳಿಂದ ಮೆರವಣಿಗೆಯಲ್ಲಿ ಕುಂಭಗಳನ್ನು ತಂದು ತಾತನವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ನಂತರ ಹಾಗೂ ಗ್ರಾಮದ ವಿವಿಧ ಸಮಾಜಗಳ ಮುಖಂಡರು, ಯುವಕರು ವೈವಿದ್ಯಮಯ ಭಾರಿ ಗಾತ್ರದ ಹೂವಿನ ಹಾರಗಳನ್ನು ಮಂಗಳ ವಾದ್ಯಗಳ ಜೊತೆಗೆ ದೇವಸ್ಥಾನಕ್ಕೆ ತಂದು ರಥೋತ್ಸವಕ್ಕೆ ಕಟ್ಟಿದ ನಂತರ ದೇವಸ್ಥಾನದ ಪೂಜಾರಿಯ ಅಣತಿಯಂತೆ ರಥೋತ್ಸವ ಆರಂಭಗೊಂಡಿತು. ರಥೋತ್ಸವಕ್ಕೆ ಸೇರಿದ್ದ ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರು ಹೂ ಹಣ್ಣು, ಕಾಯಿ ಎಸೆದು ತಮ್ಮ ಹರಕೆಯನ್ನು ತೀರಿಸಿದರು. ತಾತನ ಹಲವಾರು ಭಕ್ತರು ಮಡಿಯಿಂದ ತಾತನಿಗೆ ದೀಡ್‌ನಮಸ್ಕಾರ ಹಾಕುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು.
ರಥೋತ್ಸವದ ನಿಮಿತ್ತವಾಗಿ ತಾತನ ಮಠದಲ್ಲಿ ಏರ್ಪಡಿಸಿದ್ದ ಶ್ರೀ ಬಲಕುಂದೆಪ್ಪ ತಾತನವರ ಪುರಾಣ ಪ್ರವಚನವು ಇಂದು ಮಹಾಮಂಗಲ ಗೊಂಡಿತು. ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಂಪ್ಲಿ ಪೊಲೀಸರು ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ದೇವಸ್ಥಾನದ ಶಿವಯ್ಯತಾತ, ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖಂಡರಾದ ಕಡೇಮನಿ ಪಂಪಾಪತಿ, ಕೆ.ಷಣ್ಮುಖಪ್ಪ, ದೊಡ್ಡ ಫಕ್ಕೀರಪ್ಪ, ಅಳ್ಳಳ್ಳಿ ವೀರೇಶಪ್ಪ ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಗ್ರಾಮದ ವಿವಿಧ ಸಮಾಜಗಳ ಮುಖಂಡರು, ವಿವಿಧ ಸಂಘ- ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.ರಾತ್ರಿ ಗ್ರಾಮದ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮದ ಕಲಾವಿದರಿಂದ “ಭಕ್ತ ಪ್ರಹ್ಲಾದ” ಬಯಲಾಟ ಪ್ರದರ್ಶನಗೊಂಡಿತು.
ವರದಿ : ಜಿಲಾನ್ ಸಾಬ್ ಬಡಿಗೇರ್