
ಬಳ್ಳಾರಿ / ಕಂಪ್ಲಿ : ಕಾವೇರಿ ನದಿಗೆ ಅಡ್ಡವಾಗಿ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ರಾಮನಗರದಿಂದ ರಾಜಧಾನಿ ಬೆಂಗಳೂರಿನವರೆಗೆ ಶುಕ್ರವಾರ ಪಾದಯಾತ್ರೆ ಶುರುವಾಯಿತು.
ನಗರದ ಕೆಂಪೇಗೌಡ ವೃತ್ತದಲ್ಲಿ ಬೆಳಿಗ್ಗೆ ಜಮಾಯಿಸಿದ ಕಾರ್ಯಕರ್ತರು, ವೇದಿಕೆ ರಾಜ್ಯಾಧ್ಯಕ್ಷ ಶೆಟ್ಟಿ ನೇತೃತ್ವದಲ್ಲಿ ಸಮೀಪದ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ‘ನಮ್ಮ ನೀರು ನಮ್ಮ ಹಕ್ಕು’ ಘೋಷಣೆಯೊಂದಿಗೆ ಪಾದಯಾತ್ರೆ ಆರಂಭಿಸಿದರು. ಈ ಪಾದಯಾತ್ರೆಯಲ್ಲಿ ರಾಜ್ಯ ಸಂಚಾಲಕರಾದ ಅದ್ದಿಗೆರೆ ರಾಮಣ್ಣ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಎಚ್. ಹುಲುಗಪ್ಪ, ಸಂಡೂರು ತಾಲೂಕಿನ ಅಧ್ಯಕ್ಷ ನರಸಿಂಹ, ಕಂಪ್ಲಿ ತಾಲೂಕಿನ ಅಧ್ಯಕ್ಷ ಬಿ. ರಮೇಶ ನಗರ ಘಟಕ ಅಧ್ಯಕ್ಷ ಇಸ್ಮಾಯಿಲ್ ಬೇಗ್ ಸೇರಿದಂತೆ ಕರವೇ ಕಾರ್ಯಕರ್ತರು ಇತರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಮೇಕೆದಾಟು ಪರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಾದಯಾತ್ರೆಯುದ್ದಕ್ಕೂ ಕನ್ನಡ ಬಾವುಟಗಳು ರಾರಾಜಿಸಿದವು.
ವರದಿ : ಜಿಲಾನ್ ಸಾಬ್ ಬಡಿಗೇರ.
