
ಪ್ರಶ್ನೆಯು ಪ್ರಜ್ಞೆಯಾಗಲಿ” ಎಂಬ ಆಶಯದಿಂದ ಮಕ್ಕಳ ಕಲಿಕೆಗೊಂದು ಹಬ್ಬ
ಬಳ್ಳಾರಿ/ ಕಂಪ್ಲಿ : ಸರ್ಕಾರ ಜಾರಿಗೊಳಿಸಿರುವ ಕಲಿಕಾ ಹಬ್ಬದಿಂದಾಗಿ ಮಕ್ಕಳಿಗೆ ಸ್ಫೂರ್ತಿ ಬರಲಿದ್ದು, ಪ್ರೇರಣಾತ್ಮಕ ಕಥೆ, ಸಾಹಿತ್ಯ, ಓದು, ಕ್ರೀಡೆ ಮತ್ತು ನಲಿಕಲಿ ಹಮ್ಮಿಕೊಂಡು ಪೂರಕ ವಾತಾವರಣ ಸೃಷ್ಠಿಸುವ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲಿದೆ’ ಎಂದು ನಂ.10 ಮುದ್ದಾಪುರ ಗ್ರಾ.ಪಂ. ಯ ಅಧ್ಯಕ್ಷೆ ಸೋಮೇಶ್ವರಿ ಉದ್ಘಾಟಿಸಿದರು.
ತಾಲೂಕಿನ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಯ ಬೆಳಗೋಡ್‌ಹಾಳ್ ಗ್ರಾಮದ ಸ.ಹಿ.ಪ್ರಾ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ 8ನೇ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಿಕಾ ಹಬ್ಬದ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಗೊಳ್ಳುತ್ತದೆ. ಪ್ರತಿಭಾ ಕಾರಂಜಿ ಒಂದು ರೀತಿಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯಾದರೆ, ಕಲಿಕಾ ಹಬ್ಬ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಹೇಳಿಕೊಡುವ ಪಾಠಕ್ಕಿಂತ ಇಂತಹ ಪ್ರಾಯೋಗಿಕ ಪಾಠಗಳೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ಹೇಳಿದರು.
ನಂತರ ಸಿ.ಆರ್.ಪಿ ಚಂದ್ರಯ್ಯ ಸೊಪ್ಪಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೋಬ್ಬ ಮಕ್ಕಳು ಸ್ಪರ್ಧೆಗಳಲ್ಲೂ ಭಾಗವಹಿಸಬೇಕು. ಕಥೆ ಹೇಳುವುದು, ಸ್ಮರಣ ಪರೀಕ್ಷೆ, ಕೈಬರಹ, ಸಂತೋಷದಾಯಕ ಗಣಿತ, ರಸಪ್ರಶ್ನೆ, ಗಟ್ಟಿ ಓದು, ಮೋಜಿನ ಆಟಗಳು, ಸಂವಾದಾತ್ಮಕ ಅವಧಿಗಳು ಮತ್ತು ಕಲೆ ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಯನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಸಂತೋಷದಾಯಕ ಮತ್ತು ಅನುಭವಯುಕ್ತ ಕಲಿಕೆಗೆ ಒತ್ತು ನೀಡಲಾಗಿದೆ. ಕಲಿಕೆಯನ್ನು ಫಲಪ್ರದಗೊಳಿಸಲು ಶಿಕ್ಷಣ ಇಲಾಖೆ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಕಲಿಕಾ ಹಬ್ಬದಿಂದ ಮಕ್ಕಳಲ್ಲಿ ಶೈಕ್ಷಣಿಕ ಬಲವರ್ಧನೆ, ಸಂಖ್ಯಾಜ್ಞಾನ ಹೆಚ್ಚಿಸುತ್ತದೆ. ಕಲಿಕಾ ಹಬ್ಬ ಮಕ್ಕಳಲ್ಲಿ ನೆನಪಿನ ಶಕ್ತಿ ವೃದ್ಧಿಸುವ ಪೂರಕ ಚಟುವಟಿಕೆಗಳಿಗೆ ಒತ್ತು ನೀಡುತ್ತದೆ ಎಂದರು.
ವೇದಿಕೆ ಕಾರ್ಯಕ್ರಮ ಮುಂಚಿತವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಿಕಾ ಹಬ್ಬದ ಮೆರವಣಿಗೆ ಮಾಡಿದರು. ಕ್ಲಸ್ಟರ್ ಮಟ್ಟದ 8 ಶಾಲಾ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ದುರುಗಪ್ಪ, ಚಂದ್ರಶೇಖರಗೌಡ, ಅಸಮತ್ , ಕೆ.ಸಂಧ್ಯಾ, ಕಾರ್ಯದರ್ಶಿ ವೀರಭದ್ರಗೌಡ, ಎಸ್ಡಿಎಂಸಿ ಅಧ್ಯಕ್ಷ ಪಲ್ಲಕ್ಕಿ ಪರಶುರಾಮ, ಸದಸ್ಯರಾದ ಸಿ.ರಾಮಪ್ಪ, ಬಿ.ಓಂಕಾರಿ, ಮಲ್ಲಿಕಾರ್ಜುನಗೌಡ, ಬಿ.ರಮೇಶ, ಟಿ.ನಾಗರಾಜ, ಕೆ.ಬಸವರಾಜ, ಬಿ.ರಾಘವೇಂದ್ರ, ಎನ್.ನಾಗರಾಜ, ಇಸಿಒ ಎಂ.ರೇವಣ್ಣ, ಜಿ.ವಿರೇಶಪ್ಪ, ಸಿಆರ್‌ಪಿಗಳಾದ ರೇಣುಕಾರಾಧ್ಯ, ಭೂಮೇಶ, ಮುಖ್ಯಗುರು ಟಿ.ಮರಿಸ್ವಾಮಿ, ಹಾಗೂ ನಾಗನಗೌಡ ಎಂ.ಎ, ಹೆಚ್.ಪಿ.ಸೋಮಶೇಖರ, ವಿ. ವಸಂತ ಕುಮಾರ್, ಎಸ್.ಸುಜಾತ, ಸುನೀತಾ ಪೂಜಾರ ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
