ಬಳ್ಳಾರಿ/ ಕಂಪ್ಲಿ : ಮರಾಠಿ ಪುಂಡರಿಗೆ ಕಠಿಣ ಶಿಕ್ಷೆ ನೀಡುವ ಜತೆಗೆ ಮತ್ತೊಮ್ಮೆ ಕನ್ನಡಿಗರ ತಂಟೆಗೆ ಬಾರದಂತೆ ಶಿಸ್ತುಕ್ರಮವಹಿಸಬೇಕೆಂಬ ಹಿನ್ನಲೆಯಲ್ಲಿ ಕರೆ ನೀಡಿದ ಕರ್ನಾಟಕ ಬಂದ್‌ಗೆ ಕರುನಾಡ ರಕ್ಷಣಾ ವೇದಿಕೆಯಿಂದ ಬೆಂಬಲಿಸಿ, ಕಂಪ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಪ್ರತಿಭಟಿಸಿ, ತಹಶೀಲ್ದಾರ್ ಶಿವರಾಜ ಶಿವಪುರಗೆ ಮನವಿ ಪತ್ರ ಸಲ್ಲಿಸಿದರು.
ನಂತರ ರಾಜ್ಯ ಕಾರ್ಯಾಧ್ಯಕ್ಷ ಬಿ. ವಿರುಪಾಕ್ಷಿ ಯಾದವ್ ಮಾತನಾಡಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಕನ್ನಡ ನಾಡಿನಲ್ಲಿ ನೆಲೆಸಿ, ಕನ್ನಡಿಗರ ಮೇಲೆ ದೌರ್ಜನ್ಯ, ದಬ್ಬಾಳಿಗೆ ಮತ್ತು ಪುಂಡಾಟಿಕೆ ಮಾಡುತ್ತಿರುವ ಎಂಇಎಸ್ ಪುಂಡರಿಗೆ ತಕ್ಕಪಾಠ ಕಲಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಬೇಕು. ಇವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳಿಗೆ ಕಡಿತ ಮಾಡಬೇಕು. ಎಂಇಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಿ.ಐ ಕೆ.ಬಿ.ವಾಸುಕುಮಾರ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷ ಬಿ.ಮಂಜುಳಾ, ಉಪಾಧ್ಯಕ್ಷೆ ಕವಿತಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ, ತಾಲೂಕು ಅಧ್ಯಕ್ಷ ಜಗದೀಶ ಪೂಜಾರ, ಗೌರವಾಧ್ಯಕ್ಷ ಎಸ್.ಗೋಪಾಲ, ಪ್ರಧಾನ ಕಾರ್ಯದರ್ಶಿ ಬಿ.ರಮೇಶ, ಪದಾಧಿಕಾರಿಗಳಾದ ಕೆ.ಶಬ್ಬೀರ್, ಸಂತೋಷಕುಮಾರ, ಎಂ.ಶಿವಪ್ರಕಾಶ, ವೈ.ಯಲ್ಲಪ್ಪ, ಪ್ರವೀಣ, ಗಾದಿಲಿಂಗ, ಬಸವರಾಜ, ಶಶಿಕುಮಾರ, ಹುಲಿಗೆಮ್ಮ, ಗಂಗಮ್ಮ ಸೇರಿದಂತೆ ಇತರರು ಇದ್ದರು.
ನೀರಸ ಪ್ರತಿಕ್ರಿಯೆ :
ಕರ್ನಾಟಕ ಬಂದ್ ಹಿನ್ನಲೆ ಕಂಪ್ಲಿ ತಾಲೂಕಿನಲ್ಲಿ ಎಫೆಕ್ಟ್ ಆಗಲಿಲ್ಲ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ ಮುಂಗಟ್ಟು ಎಂದಿನಂತೆ ತೆರೆದಿದ್ದವು. ಸರ್ಕಾರಿ ಸೇರಿದಂತೆ ಪ್ರತಿಯೊಂದು ವಾಹನಗಳ ಸಂಚಾರ ನಡೆಯಿತು.
ವರದಿ : ಜಿಲಾನ್ ಸಾಬ್ ಬಡಿಗೇರ.
