ಕಲಬುರಗಿ: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ನಿಲುವು ಅವರ ಹುದ್ದೆಗೆ ತಕ್ಕದ್ದಲ್ಲ. ಅವರು ಪಕ್ಷಪಾತ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಬಿಜೆಪಿ ಮುಖಂಡ ಶರಣಕುಮಾರ ಹಾಗರಗುಂಡಗಿ ಖಂಡಿಸಿದ್ದಾರೆ.
ಅಮಾನತು ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹನಿಟ್ರ್ಯಾಪ್ ಹಗರಣದ ಕುರಿತು ವಿಧಾನಸಭೆಯಲ್ಲಿ ಚರ್ಚಿಸಲು ಸಭಾಧ್ಯಕ್ಷರು ಯಾವ ನಿಯಮದ ಅಡಿಯಲ್ಲಿ ಅವಕಾಶ ಕೊಟ್ಟರು ಎಂಬುದನ್ನು ತಿಳಿಯಲು ನಾವು ಸಭಾಧ್ಯಕ್ಷರ ಆಸನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅವರ ನಿಲುವು ಹುದ್ದೆಗೆ ತಕ್ಕದಲ್ಲ. ಸರಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಹನಿಟ್ರ್ಯಾಪ್ ಹಗರಣವನ್ನು ಗುರಾಣಿ ಮಾಡಿಕೊಂಡಿದೆ. ಈ ಹಗರಣ ಬಯಲಿಗೆಳೆಯಲು ಹೊರಟ ಬಿಜೆಪಿ ಶಾಸಕರು ಸೇರಿ ಕಲಬುರಗಿ ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮಡು ಅವರನ್ನು ಅಮಾನತು ಮಾಡಿದ್ದು, ಖಂಡನೀಯವಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ತನ್ನ ಕರ್ಮಕಾಂಡಗಳ ಸುಳಿಯಲ್ಲಿ ತಾನೇ ಸಿಲುಕಿರುವುದಕ್ಕೆ ಶುಕ್ರವಾರ ವಿಧಾನಸಭೆಯಲ್ಲಿ ನಡೆದ ಘಟನೆಯೇ ಸಾಕ್ಷಿ ನಾವು ಈ ಹೋರಾಟವನ್ನು ಜನತಾ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು. ಇದುವರೆಗೂ ರಾಜ್ಯದಲ್ಲಿ ಮನಿ ಕ್ರೈಸಿಸ್ ಇತ್ತು ಈಗ ಹನಿ ಕ್ರೈಸಿಸ್ ಶುರುವಾಗಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿಯೂ ದಿವಾಳಿಯಾಗಿದೆ. ನೈತಿಕವಾಗಿಯೂ ದಿವಾಳಿಯಾಗಿದೆ. ಒಬ್ಬ ಸಂಪುಟ ಸಚಿವರು ವಿಧಾನಸಭೆಯಲ್ಲಿ ತಮ್ಮ ಮೇಲೆ ಹನಿ ಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿತ್ತು ಎಂದು ಹೇಳುವ ಸ್ಥಿತಿಗೆ ಬಂದಿದ್ದಾರೆ. ಕಳೆದ ಹದಿನೈದು ದಿನಗಳಿಂದ ವಿಧಾನಸಭೆಯ ಮೊಗಸಾಲೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಸುಮ್ಮನೆ ನೋಡುತ್ತ ಕೂತಿದ್ದಾರೆ. ಇವತ್ತು ಅದು ಸ್ಫೋಟಗೊಂಡಿದೆ.ಸಚಿವ ಸಂಪುಟದಲ್ಲಿಯೇ ಈ ರೀತಿ ನಡೆಯುತ್ತಿರುವಾಗ ಈ ಸಚಿವ ಸಂಪುಟವನ್ನು ಏನೆಂದು ಕರೆಯಬೇಕು. ರಾಜ್ಯವನ್ನು ಆಳುವ ನೈತಿಕತೆ ಕಳೆದುಕೊಂಡಿರುವ ಕ್ರಿಮಿನಲ್ ಕ್ಯಾಬಿನೆಟ್ ರಾಜ್ಯದಲ್ಲಿದೆ ಎಂದು ಅವರು ಹೇಳಿದರು.
‘ಅಧಿಕಾರ ದಾಹಕ್ಕಾಗಿ ಮೇಲೆ ಬರಬೇಕು ಎಂದು ಈ ರೀತಿಯ ಕೃತ್ಯ ಮಾಡುವುದಕ್ಕೆ ಇತಿಶ್ರೀ ಹಾಡಬೇಕು. ಅವರು ನಿಮ್ಮನ್ನು ಕುರ್ಚಿಯಿಂದ ಇಳಿಸಲು ಮುಂದಾಗಿದ್ದಾರೆ. ಅಂತಹ ವ್ಯಕ್ತಿಯನ್ನು ವಜಾ ಮಾಡಿ. ಈ ಕೃತ್ಯಕ್ಕೆ ಪಕ್ಷ, ಜಾತಿ,ಧರ್ಮ ಏನೂ ಇಲ್ಲ. ಇದನ್ನು ಪಕ್ಷಬೇಧ ಮರೆತು ಎಲ್ಲರೂ ಖಂಡಿಸಬೇಕು’ ಎಂದು ಹೇಳಿದರು.
‘ಹನಿಟ್ರ್ಯಾಪ್ ಪ್ರಕರಣದಲ್ಲಿ ಸಚಿವರಿಗೇ ರಕ್ಷಣೆ ಕೊಡಲು ಸಾಧ್ಯವಾಗದೇ ಇದ್ದರೆ, ಸಾರ್ವಜನಿಕರಿಗೆ ರಕ್ಷಣೆ ಸಿಗಬಲ್ಲದೆ? ನಿಮ್ಮ ಸಚಿವ ಸಂಪುಟಕ್ಕೆ ನೈತಿಕತೆ ಇಲ್ಲವೇ? ನೈತಿಕತೆ ಉಳಿಸುವುದು ಮುಖ್ಯ. ತನಿಖೆ ನಡೆಸುತ್ತೇವೆ ಎಂದರೆ ಪೊಲೀಸ್ ಪೇದೆ ಮೂಲಕ ತನಿಖೆ ಮಾಡಿಸುತ್ತೀರಾ? ಯಾವ ರೀತಿಯ ತನಿಖೆ ಎಂಬದು ಸ್ಪಷ್ಟವಾಗಬೇಕಲ್ಲ’ ಎಂದು ಅವರು ಪ್ರಶ್ನಿಸಿದರು.
- ಕರುನಾಡ ಕಂದ
