ಬಳ್ಳಾರಿ / ಕಂಪ್ಲಿ : ಹೌದು ಆಶಾ ಕಾರ್ಯಕರ್ತೆ ಎಂದರೆ ಸ್ಥಳೀಯವಾಗಿ ಅವರದೇ ಆದ ಒಂದಷ್ಟು ಜವಾಬ್ದಾರಿಗಳೊಂದಿಗೆ, ಅವರ ವಾರ್ಡ್ ಗಳಲ್ಲಿ ಜನರ ಆರೋಗ್ಯವನ್ನು ನೋಡಿಕೊಳ್ಳುತ್ತಾ ತಮ್ಮ ವೈಯಕ್ತಿಕ ಕಷ್ಟಗಳನ್ನು ಮರೆತು ಬೇರೆಯವರ ಕಷ್ಟಗಳಿಗೆ ಸ್ಪಂದಿಸುತ್ತಾ ಇರುವವರು ಹಾಗೆಯೇ ಸ್ಥಳೀಯ ಕೋಟೆ ಕಂಪ್ಲಿಯ ಆರ್. ವಲಿಮಾ ಆಶಾ ಕಾರ್ಯಕರ್ತೆಯಾಗಿ ಕಳೆದ ಏಳು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಅವರ ವ್ಯಾಪ್ತಿಯ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಾ, ಮನೆ ಮನೆಗೆ ಭೇಟಿ ನೀಡಿ ಕಾರ್ಯನಿರ್ವಹಿಸುತ್ತಾ ಇವರ ವ್ಯಾಪ್ತಿಯ ಒಂದನೇ ವಾರ್ಡ್ ಕೋಟೆಯ ದಮ್ಮೂರು ಐಶ್ವರ್ಯ ಹಾಗೂ ದಮ್ಮೂರು ಮಾರುತಿ ಎಂಬುವರ ಮೂರನೇ ಮಗುವಾದ ಸಾನ್ವಿತ್ ಹುಟ್ಟಿದ ಮೇಲೆ 12 ದಿನದವರೆಗೆ ಬಾಣಂತಿ ಭೇಟಿ ಮಾಡುವ ಸಂದರ್ಭದಲ್ಲಿ ಮಗುವಿನ ತೂಕ ಕ್ಷೀಣವಾಗಿತ್ತು ಅದನ್ನು ಗಮನಿಸಿದ ಆಶಾ ಕಾರ್ಯಕರ್ತೆ ಹತ್ತಿರದ ಸಮುದಾಯ ಕೇಂದ್ರದಲ್ಲಿ ಮಕ್ಕಳ ತಜ್ಞರ ತಪಾಸಣೆಯನ್ನು ಮಾಡಿಸಿದ್ದಾರೆ. ಸ್ಥಳೀಯವಾಗಿ ಯಾವುದೇ ಪ್ರಯೋಜನವಾಗದೇ ಇದ್ದಾಗ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇಲ್ಲಿನ ವೈದ್ಯಾಧಿಕಾರಿಗಳು ತಿಳಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಜಿಲ್ಲಾ ಆಸ್ಪತ್ರೆಯವರು ಬೆಂಗಳೂರಿನ ಜಯದೇವ ಆಸ್ಪತ್ರೆ ಕರೆದುಕೊಂಡು ಹೋಗಲು ಸೂಚಿಸಿರುತ್ತಾರೆ. ಕಾರಣ ಮಗುವಿಗೆ ಹೃದಯ ಸಂಬಂಧಿತ ಕಾಯಿಲೆ ಇರುವುದಾಗಿ ಧೃಡಪಟ್ಟಿರುತ್ತದೆ. ಆದರೆ ಮಗುವಿನ ತಂದೆ ತಾಯಿ ಕಡು ಬಡವರಾಗಿರುವುದರಿಂದ ಅವರಿಗೆ ಆಶಾ ಕಾರ್ಯಕರ್ತೆ ಆರ್. ವಲಿಮಾ ಆ ಕುಟುಂಬಕ್ಕೆ ಹೆಚ್ಚಿನ ಧೈರ್ಯ ತುಂಬಿ ಹಾಗೂ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡಿಟ್ಟ ಹಣದಿಂದ ಮಗುವಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಅವರ ಸಹ ಕಾರ್ಯಕರ್ತರು ಇವರನ್ನು ಅಭಿನಂದಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಮಗುವಿಗೆ ಹೃದಯದ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಈ ಮಗು ಆರೋಗ್ಯವಂತನಾಗಿ ಇರಲಿ ಎಂಬುವುದು ನಮ್ಮ “ಕರುನಾಡ ಕಂದ” ಪತ್ರಿಕಾ ಬಳಗದ ಶುಭ ಹಾರೈಕೆ.
ವರದಿ : ಜಿಲಾನ್ ಸಾಬ್ ಬಡಿಗೇರ
