ಪಕ್ಷಿಗಳ ನೀರಿನ ದಾಹ ನೀಗಿಸಲು ಗಿಡಗಳಿಗೆ ತೂಗು ತೊಟ್ಟಿ ಕಟ್ಟಿ ನೀರುಣಿಸುವ ವಿನೂತನ ಕಾರ್ಯಕ್ರಮ
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಚಳ್ಳೂರು – ಹಗೇದಾಳ ಸರಕಾರಿ ಪ್ರೌಢ ಶಾಲೆಯಲ್ಲಿ ವನಸಿರಿ ಫೌಂಡೇಷನ್ ಹಾಗೂ ದಿಕ್ಸೂಚಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಕಾರಟಗಿ ವತಿಯಿಂದ ವಿಶ್ವ ಜಲದಿನಾಚರಣೆ ಹಾಗೂ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ತೀರಿಸಲು ಗಿಡಗಳಿಗೆ ಮಣ್ಣಿನ ತೂಗು ತೊಟ್ಟಿಗಳ ಮಣ್ಣಿನ ಅರವಟ್ಟಿಗೆಳನ್ನು ಕಟ್ಟಿ ಪಕ್ಷಿಗಳ ದಾಹ ತಣಿಸುವ ವ್ಯವಸ್ಥೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಇದೇ ವೇಳೆ ಕಾರಟಗಿ ವನಸಿರಿ ಫೌಂಡೇಷನ್ ಕಾರ್ಯದರ್ಶಿ ಶಿವಕುಮಾರ ಹಳ್ಳೂರು ಮಾತನಾಡಿ ಆಧುನಿಕತೆಯ ಭರಾಟೆಗೆ ಪರಿಸರ ವಿನಾಶವಾಗುತ್ತಿದೆ.! ಪರಿಸರ ಚಕ್ರ ತಲೆಕೆಳಗಾಗಿ ಮಾರಕ ರೋಗಗಳು,ಪ್ರಕತಿ ವಿಕೋಪಗಳು ಘಟಿಸುತ್ತಿವೆ..! ಈ ಮಧ್ಯೆ ನಮ್ಮ ನಡುವೆ ಚಿಲಿಪಿಲಿಯೆಂದು ಉಳಿಯುತ್ತಿದ್ದ ಪಕ್ಷಿಗಳು
ಕತ್ತಲು ಸರಿದು ಮೂಡಣದಲ್ಲಿ ಸೂರ್ಯ ಉದಯಿಸುವ ಹೊತ್ತಿಗೆ ಮನೆಯ ಅಂಗಳದಲ್ಲಿ ಚಿಲಿಪಿಲಿ ಗುಟ್ಟುತ್ತಿದ್ದ ಪಕ್ಷಿಗಳ ದನಿ ಇಂದು ಕೇಳದಂತಾಗಿದೆ. ಗುಬ್ಬಚ್ಚಿ, ಹದ್ದು, ಗೂಬೆ, ಕೊಕ್ಕರೆಗಳಂಥ ಪಕ್ಷಿಗಳ ಸಂತತಿ ಈಗಾಗಲೇ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಗಿಡ ಮರಗಳು ಕಣ್ಮರೆಯಾಗಿ ಎಲ್ಲೆಡೆಗಿದ್ದ ಹಚ್ಚ ಹಸಿರು ಮಾಯವಾಗಿ ಬಟಾಬಯಲು ಕಾಣುತ್ತಿದೆ. ಇದರಿಂದ ಪಕ್ಷಿಲೋಕ ಅವನತಿಯ ಅಂಚಿಗೆ ಬಂದು ತಲುಪಿದೆ..! ಆದ್ದರಿಂದ ಮುಂದಿನ ಪೀಳಿಗೆಗೆ ಪಕ್ಷಿ ಸಂಕುಲ ಉಳಿಸಲು ಪ್ರತಿಯೊಬ್ಬರೂ ಬೇಸಿಗೆಯಲ್ಲಿ ಒಂದಿಷ್ಟು ಮಡಿಕೆಗಳೊಂದಿಗೆ ನೀರಿನ ವ್ಯವಸ್ಥೆ ಕಲ್ಪಿಸಿ ಪಕ್ಷಿಗಳ ದಾಹ ತೀರಿಸಲು ಮುಂದಾಗಬೇಕು ಎಂದರು.
ಪರಿಸರ ಸಂರಕ್ಷಣೆ ಮತ್ತು ಪಕ್ಷಿಗಳಿಗೆ ನೀರಿನ ಅರವಟಿಗೆ ವ್ಯವಸ್ಥೆ ಕಲ್ಪಿಸುವ ಮಹತ್ವವನ್ನು ಈ ಕಾರ್ಯಕ್ರಮವು ಸಾರಿತು. ಮುಂದಿನ ಪೀಳಿಗೆಗೆ ಪಕ್ಷಿ ಸಂಕುಲ ಉಳಿಸಿ, ನೀರನ್ನು ಉಳಿಸಿ ಎಂಬ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ಈ ಸಂಧರ್ಭದಲ್ಲಿ ವನಸಿರಿ ತಾಲೂಕ ಘಟಕ ಉಪಾಧ್ಯಕ್ಷರು ಡಾ. ಬಸಲಿಂಗಪ್ಪ ಹಳ್ಳೂರ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರಟಗಿ, ಲಕ್ಷ್ಮೀ ಹಳ್ಳೂರ, ಅಧ್ಯಕ್ಷರು, ಡಾ.ಬಸಲಿಂಗಪ್ಪ ಹಳ್ಳೂರು ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕಾರಟಗಿ, ಪ್ರೌಢಶಾಲೆಯ ಶಿಕ್ಷಕರಾದ ವೀರಭದ್ರಯ್ಯ ಹಾಗೂ SSLC ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- ಕರುನಾಡ ಕಂದ
