ಬಳ್ಳಾರಿ / ಕಂಪ್ಲಿ : ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ವ್ಯಾಪಾರಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಹೇಳಿದರು.
ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪುರಸಭೆ ಹಾಗೂ ಡೆ-ನೆಲ್ಮ ಮತ್ತು ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ ಗುರುತಿನ ಕಾರ್ಡ್, ಮಾರಾಟ ಪ್ರಮಾಣ ಪತ್ರ ವಿತರಣೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ‘ರಾಜ್ಯ ಸರ್ಕಾರ ವಿಶೇಷವಾಗಿ ಡೇ-ನಲ್ಮ್ ಯೋಜನೆಯಡಿ ಬೀದಿ ಬದಿ ಹಾಗೂ ತಳ್ಳುಗಾಡಿ ವ್ಯಾಪಾರಿಗಳಿಗೆ ಅನೇಕ ಸೌಕರ್ಯಗಳನ್ನು ಮಾಡಿ ಕೊಡುತ್ತಿದೆ. ಈ ದಿಕ್ಕಿನಲ್ಲಿ ಸಣ್ಣ ವ್ಯಾಪಾರಸ್ಥರು ಜಾಗೃತರಾಗಿ ಸರ್ಕಾರದ ಯೋಜನೆಗಳನ್ನು ಉಪಯೋಗ ಮಾಡಿಕೊಂಡು ತಮ್ಮ ಬದುಕನ್ನು ಹಸನು ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಉಸ್ಮಾನ್ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಬೀದಿ ಬದಿ ವ್ಯಾಪಾರಿಗಳಿಗೆ ತಲುಪಿಸಬೇಕು. ಬ್ಯಾಂಕ್ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು, ಆರ್ಥಿಕವಾಗಿ ವೃದ್ಧಿಸಬೇಕು ಎಂದರು. ಇದೇ ವೇಳೆ 105 ಜನಕ್ಕೆ ಗುರುತಿನ ಕಾರ್ಡ್ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. 200 ಜನಕ್ಕೆ ಟೀ ಶರ್ಟ್ ವಿತರಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೆ.ದುರುಗಣ್ಣ, ಬೀದಿ ಬದಿ ವ್ಯಾಪಾರ ಸಂಘದ ತಾಲೂಕು ಅಧ್ಯಕ್ಷ ರಾಮಾಂಜನಿ, ಬೀದಿ ಬದಿ ವ್ಯಾಪಾರದ ಸಿಒ ಪ್ರವೀಣ್, ಯೋಜನಾಧಿಕಾರಿ ಪ್ರಶಾಂತ್, ಸಿಆರ್‌ಪಿಗಳಾದ ರೋಜಮ್ಮ, ರೇಣುಕಾ ಹಾಗೂ ಪಟ್ಟಣ ಮಾರುಕಟ್ಟೆ ಸಮಿತಿಯ ಸದಸ್ಯರಾದ ಕೆ.ರಂಗಪ್ಪ, ಬಿ.ಕೃಷ್ಣ, ಕಾಶಿ, ಕನಕ, ವನೀತಮ್ಮ ಸೇರಿದಂತೆ ಬೀದಿ ವ್ಯಾಪಾರಸ್ಥರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
