ಗುಡಿಸಲಿನ ಸೂರಿಂದ
ಬೆಳ್ಳಕ್ಕಿ ಇಣುಕಿತ್ತು
ಬಡತನದ ನೋವಿಂದ
ಕವಿತೆಯು ಮೂಡಿತ್ತು
ಬತ್ತಿದ ಕಣ್ಣೊಳಗೆ
ಕಂಬನಿಯು ಇಂಗಿತ್ತು
ಸದ್ದಡಗಿದ ಎದೆಯೊಳಗೆ
ಹೊಸ ಪಲ್ಲವಿ ಗುನುಗಿತ್ತು
ಪ್ರತೀ ನೋವಿನ ಇರಿತಕ್ಕೂ
ಪದ ನೆತ್ತರು ಹರಿದಿತ್ತು
ಮೌನದ ಮನ ಕೊರೆತಕ್ಕು
ಭಾವಗಳ ಅಲೆ ಮೊರೆದಿತ್ತು
ಆರೆ ಹೊಟ್ಟೆಯ ಬೆಂಕಿಯಲಿ
ಕವಿ ಚಿಟ್ಟೆಯು ಕುಣಿದಿತ್ತು
ಮೂದಲಿಕೆಗಳ ಕೊಂಕಿನಲಿ
ರಟ್ಟೆಯ ಛಲ ಮಣಿದಿತ್ತು
ಬಡತನದ ಬಿರುಮಳೆಗೆ
ಎದೆ ಗುಡಿಸಲು ಸೋರಿತ್ತು
ಸಿರಿತನದ ಕನಸೊಳಗೆ ಕವಿತೆ
ಹುಸಿನಗುವ ತೋರಿತ್ತು
ಜಗದ ನೋವಲ್ಲಿ
ಕವಿ ಮನಸು ಅಳುತಿತ್ತು
ಜಗದ ನಗುವಲ್ಲಿ
ತನ್ನ ನೋವ ಮರೆತಿತ್ತು
ವಿಷಜಂತು ಕ್ರಿಮಿಕೀಟ ಕಾಟದಲಿ
ಗುಡಿಸಲಿನ ಬದುಕು ಬಸವಳಿದಿತ್ತು
ಸುಖದ ಮಾಯೆಯ ಹುಡುಕಾಟದಲ್ಲಿ
ಪದಗಾರುಡಿಯ ಮೋಡಿ ಬರಸೆಳೆದಿತ್ತು
ಕವಿತೆಯ ಒಡಲಲ್ಲಿ ನೋವು ಅಡಗಿತ್ತು
ನೋವುಂಡ ಕವಿತೆ ಸೊಬಗ ಸೂಸಿತ್ತು
ಬಡತನದ ಸೊಬಗು ಸಿರಿತನವ ಕೆಣಕಿತ್ತು
ಕವಿಯ ಬಡತನವ ಜಗ ಕಾಣದಾಗಿತ್ತು
– ಮುಡಿಯಪ್ಪ ಹಣಮಂತ ಹುಡೇದ

