ಯಾದಗಿರಿ/ಶಹಾಪುರ : ಏಪ್ರಿಲ್. 15 ರವರೆಗೆ ನೀರು ಹರಿಸದಿದ್ದಲ್ಲಿ ರೈತರು 60 ಸಾವಿರ ಹೆಕ್ಟೇರ್ ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ ಒಂದು ವೇಳೆ ನೀರು ಕೊಡದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹ ಕೂಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವಾಸುದೇವ ಮೇಟಿ ಬಣದ ಶಹಾಪುರ ತಾಲೂಕು ಅಧ್ಯಕ್ಷರಾದ ದೇವಿಂದ್ರಪ್ಪ ಕೋಲ್ಕರ್ ಇವರು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
ಹಿಂಗಾರು ಬಿತ್ತನೆ ಮಾಡಿಕೊಂಡ ರೈತರು ಶೇಂಗಾ, ಭತ್ತ, ಸಜ್ಜೆ, ಮೆಣಸಿಕಾಯಿ ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಿದ್ದು, ಏ.10 ರವರೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗೆ ನೀರು ಹರಿಸದಿದ್ದಲ್ಲಿ ಜಿಲ್ಲೆಯಲ್ಲಿ ಒಟ್ಟು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿ, ಲಕ್ಷಾಂತರ ರೂ. ಗಳನ್ನು ಸಾಲ ಮಾಡಿಕೊಂಡ ರೈತರ ಸರಣಿ ಆತ್ಮಹತ್ಯೆಗಳ ಸರಮಾಲೆ ನಡೆದೀತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಶಹಾಪುರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರು ಬಿತ್ತನೆ ಮಾಡಿದ ಪ್ರತಿ ಬೆಳೆ ಪೈರು ಅವಧಿ ಮೂರೂವರೆ ತಿಂಗಳಿದ್ದು, ನೀರನ್ನೇ ನಂಬಿಕೊಂಡು ತಮ್ಮ ಹೊಲಗದ್ದೆಗಳಲ್ಲಿ ಬಿತ್ತನೆ ಮಾಡಿದ್ದಾರೆ. ಸರ್ಕಾರ ನೀರು ಬಿಡಲು ನಿರಾಕರಿಸಿದಲ್ಲಿ ರೈತರಿಗೆ ಒಟ್ಟು 10 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟವಾಗಿ ಆತಂಕದಲ್ಲಿ ಕಾಲ ಕಳೆಯಬೇಕಾಗುತ್ತದೆ ಎಂದರು.
ಜಲಾಶಯ ಭರ್ತಿ ಎಂದು ಹೇಳಿಕೆ ನೀಡಿದ್ದ ಅಧಿಕಾರಿಗಳು ಇಂದು ನೆರೆಯ ತೆಲಂಗಾಣಕ್ಕೆ 2 ಟಿಎಮ್‌ಸಿ ಎಂದು ನಾಲ್ಕಾರು ದಿನಗಳ ಕಾಲ ಅಂದಾಜು 10 ಟಿ,ಎಮ್,ಸಿ, ನೀರು ಬಿಟ್ಟಿರುವುದೇ ನಮ್ಮ ಬೆಳೆಗಳಿಗೆ ನೀರಿನ ಕೊರತೆಗೆ ಕಾರಣವಾಗಿದೆ,
ನಿಷೇಧಿತವಾಗಿದ್ದರೂ ಭತ್ತ ಬೆಳೆದು ರೈತರು ಆತಂಕದಲ್ಲಿದ್ದಾರೆ. ಬೆಳೆ ಪರಿಹಾರ ಸೂಕ್ತವಾಗಿ ಹಂಚಿಕೆಯಾಗಬೇಕು ಎಂದರು.
- ಕರುನಾಡ ಕಂದ
