ಬೆಂಗಳೂರು – ನಗರದ ಅಮೃತ್ತಳ್ಳಿ ಪೋಲೀಸ್ ಠಾಣೆಯಲ್ಲಿ ಸಬ್ ಇನ್ಸಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕೆ ಬಿ ಸುನಿಲ್ ಕುಮಾರ್ ರವರು 2023 ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿಗೆ ಭಾಜನರಾಗಿದ್ದು, ದಿ. 03-04-2025 ರಂದು ನಡೆದ ಪೋಲೀಸ್ ಧ್ವಜ ದಿನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು . ಸಮಾರಂಭದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹಾಜರಿದ್ದರು. ಕೆ ಬಿ ಸುನಿಲ್ ಕುಮಾರ್ ರವರು ಎಂ ಎ ಪದವೀಧರರಾಗಿದ್ದು, 2016 ಪಿ ಎಸ್ ಐ ಬ್ಯಾಚ್ ನ ಅಧಿಕಾರಿಯಾಗಿದ್ದು, ಈ ಹಿಂದೆ ಬೆಂಗಳೂರು ನಗರದ ಯಲಹಂಕ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸೇವೆಗೆ ಸೇರಿದ ಕಡಿಮೆ ಸೇವಾ ಅವಧಿಯಲ್ಲಿಯೇ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿರುವುದು ಇವರ ಸೇವಾ ದಕ್ಷತೆಯನ್ನು ತೋರುತ್ತದೆ.
ಬೆಂಗಳೂರಿನ ಏರ್ ಆನ್ ಕಂಪನಿಯ ಎಂ ಡಿ ಹಾಗೂ ಸಿ ಇ ಓ ಹತ್ಯೆ ಕೇಸ್ ನಲ್ಲಿ (ಕೇಸ್ ನಂ.186/23 ) ಸಹಾಯಕ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಹಲವು ಕೊಲೆ ಬೆದರಿಕೆ ಪ್ರಕರಣಗಳಲ್ಲಿ ಹಾಗೂ ಕಳವು ಪ್ರಕರಣಗಳಲ್ಲಿ ತನಿಖಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಕಳವು ಮಾಲನ್ನು ಸಂಬಂಧಿಸಿದವರಿಗೆ ಹುಡುಕಿಕೊಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಕೆ ಬಿ ಸುನಿಲ್ ಕುಮಾರ್ ರವರು ಮೂಲತಃ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದ ಮೈತ್ರ ಹಾಗೂ ಬೆಟ್ಟಪ್ಪನವರ ಪುತ್ರರಾಗಿದ್ದು, ತುಮಕೂರಿನ ಸಿದ್ದಗಂಗಾ ಮಠದಲ್ಲಿ ಡಿ. ಇಡಿ ಹಾಗೂ ಪದವಿ ಶಿಕ್ಷಣ ಪಡೆದು, ಕೆ ಎಸ್ ಓ ಯು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಎಂ ಎ ಪದವಿ ಪಡೆದಿದ್ದಾರೆ. ಈ ಹಿಂದೆ 7 ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಕೂಡಾ ಉತ್ತಮ ಸೇವೆ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಮತನಾಡಿದ ಸುನಿಲ್ ಕುಮಾರ್ ಸರ್ಕಾರ ನನ್ನ ಸೇವೆಯನ್ನು ಗುರ್ತಿಸಿ ಮುಖ್ಯಮಂತ್ರಿಗಳ ಪದಕ ನೀಡಿರುವುದು ತುಂಬಾ ಸಂತೋಷ ತಂದಿದ್ದು, ನನ್ನ ಜವಬ್ದಾರಿಯನ್ನು ಹೆಚ್ಚಿಸಿದೆ. ಮುಂದೆಯೂ ಇನ್ನು ಹೆಚ್ಚಿನ ಸೇವೆ ಸಲ್ಲಿಸುತ್ತೇನೆಂದು ತಿಳಿಸಿದರು.
ವರದಿ : ಮನು ಸಿಡ್ಲೆಹಳ್ಳಿ
