ಬಳ್ಳಾರಿ / ಕಂಪ್ಲಿ : ಮುಡಾ ಹಗರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ ಬಜೆಪಿಯವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಿ.ಎಂ ಹೆಸರಿಗೆ ಕಳಂಕ ತರುವ ಹುನ್ನಾರದಿಂದ ಮುಡಾ ಹಗರಣ ಪ್ರಸ್ತಾಪಿಸುತ್ತಿದ್ದಾರೆ ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ನಾಗರಾಜ ಹೇಳಿದರು.
ತಾಲೂಕು ಸಮೀಪದ ಮಣ್ಣೂರು ಗ್ರಾಮದಲ್ಲಿ 2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ ಸುಮಾರು 2 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಮಣ್ಣೂರು ಸೂಗೂರು ಗ್ರಾಮದ ಮುಖ್ಯರಸ್ತೆಯಿಂದ ಎಮ್ಮಿಗನೂರು ವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕೇಂದ್ರ ಸರ್ಕಾರವು ಸಾಕಷ್ಟು ಬೆಲೆ ಏರಿಕೆಯೊಂದಿಗೆ ದೇಶದ ಜನರ ಬದುಕಿಗೆ ಕಣ್ಣೀರು ಎರಚಿದ್ದು, ಈಗ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಯೊಂದಿಗೆ ಸುಭದ್ರವಾಗಿ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಬೆಲೆ ಏರಿಕೆ ಗೂಬೆ ಕೂರಿಸುವಂತಹ ಕೆಲಸ ಮಾಡುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಸುಭದ್ರವಾಗಿ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ಬರುವ ದಿನಗಳಲ್ಲಿ ಕೆಲ ಕ್ಷೇತ್ರಗಳು ವಿಂಗಡಣೆಯಾಗಲಿವೆ, ರಸ್ತೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳೊಂದಿಗೆ ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಕರಿಯಪ್ಪ, ಗುತ್ತಿಗೆದಾರ ದಮ್ಮೂರು ಶ್ರೀನಿವಾಸ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
