ಬೀದರ್/ ಬಸವಕಲ್ಯಾಣ – ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ೧೩ನೆಯ ಸಮ್ಮೇಳನವನ್ನು ದಿ.೧೦ ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಅಫಜಲಪುರ ಹಿರೇಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ಸಾನಿಧ್ಯದಲ್ಲಿ ಶಾಸಕ ಶರಣು ಸಲಗರ ಉದ್ಘಾಟಿಸಲಿದ್ದು, ಸರ್ವಾಧ್ಯಕ್ಷರಾಗಿ ಶ್ರೀನಿವಾಸ ಸರಡಗಿಯ ಡಾ. ರೇವಣಸಿದ್ದ ಶಿವಾಚಾರ್ಯರು ಪಾಲ್ಗೊಳ್ಳುವರು. ನಿಕಟಪೂರ್ವ ಸರ್ವಾಧ್ಯಕ್ಷ ಆತಿಥೇಯ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ವಹಿಸುವರು ಇದೇ ಸಂದರ್ಭದಲ್ಲಿ ಘನಲಿಂಗ ರುದ್ರಮುನಿ ಜಾತ್ರಾ ಮಹೋತ್ಸವ ಅಂಗವಾಗಿ ಐದು ಜನ ಗಣ್ಯರಿಗೆ ” ಅಭಿನವ ಘನಲಿಂಗ ಶ್ರೀ ” ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಗವಿಮಠದ ಡಾ. ಘನಲಿಂಗ ರುದ್ರಮುನಿ ಶಿವಾಚಾರ್ಯ ತಿಳಿಸಿದರು. ಶ್ರೀ ಮಠದಲ್ಲಿ ಮಂಗಳವಾರ ಮಧ್ಯಾಹ್ನ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ವಿವರ ನೀಡಿದರು. ಸಮ್ಮೇಳನದಲ್ಲಿ ವಿಚಾರಗೋಷ್ಟಿ, ಚುಟುಕು ವಾಚನ ಗೋಷ್ಟಿಯಲ್ಲಿ ನಾಡಿನ ಹೆಸರಾಂತ ಬರಹಗಾರರು, ಕವಿಗಳು ಭಾಗವಹಿಸುವರು ಜತೆಯಲ್ಲಿ ಸಂಗೀತ, ನೃತ್ಯವನ್ನು ಸ್ಥಳೀಯ ಪ್ರತಿಭೆಗಳಿಂದ ಏರ್ಪಡಿಸಲಾಗಿದೆ ಎಂದು ಹೇಳಿದರು. ಇನ್ನು ಕ.ಚು.ಸಾ.ಪ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಮಾತನಾಡಿ, ಸರಕಾರದ ಯಾವುದೇ ಅನುದಾನವಿಲ್ಲದೇ ನಾವು ನಾಡಿನ ಮಠಾಧೀಶರ ಹಾಗೂ ಸಾಹಿತ್ಯಾಸಕ್ತರ ಸಹಕಾರದಿಂದ ಕಳೆದ ಹದಿನೈದು ವರ್ಷಗಳಿಂದ ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾಡಿನ ಮಠಾಧೀಶ ಸಾಹಿತಿಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ, ಬರುವ ಜೂನ್ ತಿಂಗಳು ಕಾಸರಗೋಡು ಅಂತರರಾಜ್ಯ ಸಮ್ಮೇಳನದ ಸಿದ್ದತೆ ಮಾಡಲಾಗಿದೆ. ಪುಸ್ತಕ ದಾಸೋಹದ ಮೂಲಕ ನಾಡಿನ ಕೊಳಗೇರಿ ಶಾಲೆಗಳು, ಕಾರಾಗ್ರಹ ಮತ್ತು ಆಸಕ್ತರಿಗೆ ಉಚಿತ ಪುಸ್ತಕ ನೀಡಲಾಗುತ್ತಿದ್ದು, ಇದುವರೆಗೆ ಮೂರು ಲಕ್ಷ ಸಾಹಿತ್ಯ ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಸಾಹಿತಿ , ಪರಿಸರ ಸಂರಕ್ಷಕ, ಕ.ಚು.ಸಾ.ಪ ಜಿಲ್ಲಾಧ್ಯಕ್ಷ ಸಂಗಮೇಶ ಎನ್ ಜವಾದಿ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಘಟಕದ ಉಪಾಧ್ಯಕ್ಷೆ ಡಾ. ವಂದಾನ ರಮೇಶ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ
