ಕಲಬುರಗಿ / ಚಿತ್ತಾಪುರ : ಒಂದು ಕಾಲಕ್ಕೆ ಮನುಷ್ಯ ಜೀವನದ ಶ್ರಮ ಸಂಸ್ಕೃತಿ ಹೆಚ್ಚಿಸಿ ಲವಲವಿಕೆ ಜೀವನಕ್ಕೆ ಕಾರಣವಾಗುತ್ತಿದ್ದ ಜಾನಪದ ಸಂಸ್ಕೃತಿ ಇಂದು ನಿಧಾನವಾಗಿ ಮರೆಯಾಗುತ್ತಿರುವುದು ನಾಡಿನ ದುರಂತವಾಗಿದೆ ಎಂದು ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಅಳ್ಳೊಳ್ಳಿ ಸಾವಿರ ದೇವರ ಸಂಸ್ಥಾನ ಮಠದ ಸದ್ಗುರು ಶ್ರೀ ಸಿದ್ದಲಿಂಗೇಶ್ವರರ 9ನೇ ವರ್ಷದ ಜಾತ್ರಾ ಪ್ರಯುಕ್ತ 5 ದಿನಗಳ ಕಾಲ ಜರುಗಿದ ಆಧ್ಯಾತ್ಮಿಕ ಕಾರ್ಯಕ್ರಮದ ಸಮಾರೋಪ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಎಲ್ಲರೂ ಒಟ್ಟಿಗೆ ಹಾಡು ಹಾಡುತ್ತಾ ಕುಣಿಯುತ್ತಾ ನಲಿಯುತ್ತಾ ಶ್ರಮ ಹಾಕಿ ದುಡಿಯುತ್ತಾ ಸಾಮಾಜಿಕ ಸಂಬಂಧಗಳನ್ನು ಉತ್ತಮ ಪಡಿಸಿಕೊಳ್ಳಲಾಗುತ್ತಿತ್ತು. ಸಂಬಂಧಗಳ ವೃದ್ಧಿಗೆ ಜಾನಪದ ಸಂಸ್ಕೃತಿ ಪ್ರಮುಖ ಕಾರಣವಾಗಿತ್ತು ಎಂದರು.
ರಾಜ್ಯ ಸರ್ಕಾರ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪೋಷಿಸುವ ನಿಜವಾದ ಸಂಘ ಸಂಸ್ಥೆಗಳ ಬೆನ್ನೆಲುಬಾಗಿ ನಿಲ್ಲಬೇಕು. ಅರ್ಹ ಕಲಾವಿದರನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸ ಮಾಡಬೇಕು. ಅರುಣೋದಯ ಜಾನಪದ ಕಲಾ ತಂಡ ರಚಿಸಿಕೊಂಡು ನಾಡಿನ ತುಂಬಾ ಓಡಾಡಿ ಪ್ರಚಾರ ನಡೆಸುತ್ತಿರುವ ಗದಗ ಜಿಲ್ಲೆ ರೋಣ ತಾಲೂಕಿನ ರಾಜಶೇಖರ ಹಿರೇಮಠ ಕೊತಬಾಳ ಅವರ ಕಾರ್ಯ ಶ್ಲಾಘನೀಯ ಎಂದು ಕೊಂಡಾಡಿದ ಅವರು ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಹಾಸ್ಯ ಕಲಾವಿದ ಉಲ್ಲಾಸ ಮಾಗಣಗೇರಿ ಅವರಿಂದ ಹಾಸ್ಯ ರಸಮಂಜರಿ ಜರುಗಿತು.
ಇದೇ ಸಂದರ್ಭದಲ್ಲಿ ವೈದ್ಯರಾದ ಪ್ರಶಾಂತ ಕುಲ್ಕರ್ಣಿ, ಗಿರೀಶ ಪವಾರ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯ ಮಾನವ ಸಂಪನ್ಮೂಲ ನಿರ್ವಹಣಾ ಅಧಿಕಾರಿ ಕೆ ವಿ ವೈ ಎಸ್ ನಾರಾಯಣ ಅವರಿಗೆ ಮಠದ ವತಿಯಿಂದ ನೀಡಲ್ಪಡುವ ಕಾಯಕಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್ ಉದ್ಘಾಟಿಸಿದರು.
ಕಲಕೇರಿ ಮರುಳಸಿದ್ದೇಶ್ವರ ಸಂಸ್ಥಾನ ಮಠದ ಸಿದ್ದರಾಮ ಶಿವಾಚಾರ್ಯ, ದಂಡಗುಂಡ ಸಂಗನಬಸವ ಶಿವಾಚಾರ್ಯ, ತೋನಸನಹಳ್ಳಿ ಚರಂತೇಶ್ವರ ಸಂಸ್ಥಾನ ಮಠದ ರೇವಣಸಿದ್ಧ ಶಿವಾಚಾರ್ಯ, ಹಲಕರ್ಟಿ ಸಿದ್ದೇಶ್ವರ ಹಿರೇಮಠದ ರಾಜಶೇಖರ ಶಿವಾಚಾರ್ಯ, ಸೇಡಂನ ಹಾಲಪ್ಪಯ್ಯ ವಿರಕ್ತಮಠದ ಪಂಚಾಕ್ಷರಿ ಮಹಾಸ್ವಾಮಿ, ಬೆನಕನಹಳ್ಳಿ ವಿರಕ್ತ ಮಠದ ಕೇದಾರಲಿಂಗ ಸ್ವಾಮಿ, ಡೊಂಣ್ಣೂರು ಸಾರಂಗಧರೇಶ್ವರ ಸಂಸ್ಥಾನ ಮಠದ ಪ್ರಶಾಂತ ದೇವರು, ಬೊಮ್ಮನಳ್ಳಿ ಚಂದ್ರಶೇಖರ ಶಿವಾಚಾರ್ಯ ಮುಖಂಡರಾದ ರಾಜುಗೌಡ ಮಾಲಿಪಾಟೀಲ, ಸಂಗಣ್ಣಗೌಡ ಅನ್ವರ, ಸೋಮಶೇಖರಗೌಡ ಮುಸೇನಿ, ವೀರಾರೆಡ್ಡಿ ಮುಸೇನಿ, ಮಹದೇವಪ್ಪ ಡೋಣಗಾಂವ, ರವಿಕುಮಾರ ಪಡ್ಲಾ, ಶ್ರೀಶೈಲ ಗುತ್ತೇದಾರ, ಶಿವಣ್ಣ ಹೂಗಾರ, ದೇವಿಂದ್ರಪ್ಪ ಹಾದಿಮನಿ, ಶಾಂತಕುಮಾರ ಎಣ್ಣಿ, ಈರಣ್ಣ ಮಲ್ಕಂಡಿ, ತಿಪ್ಪರೆಡ್ಡಿಗೌಡ ಗೌನಳ್ಳಿ, ಅಡಿವೆಪ್ಪ ಬಳಬಾ, ದೇವಪ್ಪ ಪೋಟಿ, ಹಣಮಂತ ಬಳಬಾ, ರಾಜಶೇಖರ ಡೋಣಗಾಂವ, ಮಂಜುಗೌಡ, ಮರೆಪ್ಪ ದಂಡಗುಂಡ ಮಹೇಂದ್ರಗೌಡ ಗುತ್ತೇದಾರ ಯಾದಗಿರಿ ಹಾಗೂ ರಾಮರಾವ ಕುಲಕರ್ಣಿ ಪರಿವಾರ ಹಾಗೂ ಇನ್ನಿತರರು ವೇದಿಕೆ ಮೇಲಿದ್ದರು.
ಶಾಂತಣ್ಣ ಚಾಳಿಕಾರ ನಿರೂಪಿಸಿದರು,
ಶಾಂತಕುಮಾರ ಎಣ್ಣಿ ವಂದಿಸಿದರು.
ಅಯ್ಯಪ್ಪಗೌಡ ಮಾಲಿಪಾಟೀಲ ಪರಿವಾರದಿಂದ ಸಂಗಮನಾಥ ಸ್ವಾಮೀಜಿಗೆ ಫಲಪುಷ್ಪಗಳಿಂದ ತುಲಾಭಾರ ಜರುಗಿತು.
ವರದಿ ಮೊಹಮ್ಮದ್ ಅಲಿ, ಚಿತ್ತಾಪುರ
