ವಿಜಯನಗರ : ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಫಸ್ಟ್ ರ‍್ಯಾಂಕ್ ಬಂದ ಕೊಟ್ಟೂರು ಇಂದು ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಬಾಯಿಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಟಿ. ಶ್ರೀನಿವಾಸ್ ಅವರು ಒಂದು ಲ್ಯಾಪ್‌ಟಾಪ್ ಹಾಗೂ 25 ಸಾವಿರ ರೂ.ನಗದು ಹಣವನ್ನು ನೀಡಿ ಗೌರವಿಸಿದ್ದಾರೆ.
ಪಿಯು ಫಲಿತಾಂಶ ಕಳೆದೆರಡು ದಿನಗಳ ಹಿಂದೆ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಇಂದು ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಬಾಯಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈ ಮಾಹಿತಿ ತಿಳಿದು ತಮ್ಮ ಕ್ಷೇತ್ರದ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂಧಿದ್ದರಿಂದ ಸಂತಸ ಹಂಚಿಕೊಂಡಿದ್ದಾರೆ. ಜೊತೆಗೆ, ವಿದ್ಯಾರ್ಥಿನಿಯ ಮನೆಗೆ ಹೋಗಿ ಗೌರವಿಸುವುದಾಗಿ ಕಾಲೇಜಿಗೆ ಹೋಗಿ ಮಾಹಿತಿ ಪಡೆದಿದ್ದರು. ಇದೀಗ ವಿದ್ಯಾರ್ಥಿನಿಯ ವಿಳಾಸವನ್ನು ಪಡೆದು ಗುರುವಾರ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಪಕ್ಕದ ಗುಂಡ ತಾಂಡಾ ಗ್ರಾಮದ ಸಂಜನಾಬಾಯಿ ಮನೆಗೆ ತೆರಳಿ ಗೌರವಿಸಿದ್ದಾರೆ.
ಮರಿಯಮ್ಮನಹಳ್ಳಿಯ ಪಕ್ಕದ ಗುಂಡ ತಾಂಡಾ ಗ್ರಾಮದ ಸಂಜನಾಬಾಯಿ ಮನೆಯಲ್ಲಿ ಬಡತನವಿದ್ದರೂ ಉತ್ತಮ ಅಂಕ ಗಳಿಸೋ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇನ್ನೂ ಸಾಧನೆ ಮಾಡಲು ಬಡತನ ಎಂಬುದು ಅಡ್ಡಿ ಬರುವುದಿಲ್ಲ ಗುರಿ ಒಂದಿದ್ದರೆ ಎಂತಹ ಕಷ್ಟಗಳನ್ನು ದಾಟಿ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಸಂಜನಾ ಬಾಯಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಇತರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕೆನ್ನುವ ನಿಟ್ಟಿನಲ್ಲಿ ಲ್ಯಾಪ್‌ಟಾಪ್ ಹಾಗೂ ಹಣದ ಸಹಾಯ ಮಾಡಿರುವುದಾಗಿ ಶಾಸಕ ಶ್ರೀನಿವಾಸ ಹೇಳಿದ್ದಾರೆ. ಜೊತೆಗೆ, ವಿದ್ಯಾರ್ಥಿನಿಯ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಮಸ್ಯೆ ಬಂದಲ್ಲಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
- ಕರುನಾಡ ಕಂದ
