ಕಲಬುರಗಿ: ಜಾತಿಗಣತಿ ವೇಳೆ ಮಾದಿಗ ಜನಾಂಗದ ಎಲ್ಲರೂ ಮಾದಿಗ ಎಂದೇ ಜಾತಿ ಹೆಸರನ್ನು ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಮಾದಿಗ ಸಮಾಜದ ಜಿಲ್ಲಾಧ್ಯಕ್ಷ ಸಿದ್ದಲಿಂಗ ಸಿ ಕಟ್ಟಿಮನಿ ಅವರು ಮಾದಿಗ ಸಮಾಜದ ಕುಲಬಾಂದವರಲ್ಲಿ ಮನವಿ ಮಾಡಿಕೊಂಡರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಜಾತಿಗಣತಿಯಿಂದ ಯಾವುದೋ ಒಂದು ಜಾತಿಗೆ ಅನುಕೂಲವಾಗುವುದಿಲ್ಲ. ಎಲ್ಲರೂ ಅವರವರ ಜಾತಿಯನ್ನು ನಮೂದಿಸಿದರೆ ಅವರವರ ಜಾತಿಗೇ ಅನುಕೂಲವಾಗುತ್ತದೆ. ಹಾಗೆಯೇ, ಮಾದಿಗರು ಸಹ ಮಾದಿಗ ಜಾತಿ ಎಂದು ಬರೆಸಬೇಕು. ಉಪಜಾತಿಗಳನ್ನು ಬರೆಸುತ್ತಾ ಹೋದರೆ ಸಮಾಜಕ್ಕೆ ಅನುಕೂಲವಾಗಲಿದೆ.
ಇದಕ್ಕಾಗಿ ಜನಾಂಗದ ಮುಖಂಡರು ಪ್ರತಿ ಗ್ರಾಮದಲ್ಲೂ ನಿಗಾವಹಿಸಿ ಕರಪತ್ರ ಹಂಚಿಕೆ ಮೊದಲಾದ ಮಾರ್ಗಗಳ ಮೂಲಕ ಜನಾಂಗದ ವಿಧ್ಯಾವಂತರು,ಯುವಕರು, ಮುಖಂಡರು,ಪ್ರತಿ ಗ್ರಾಮದಲ್ಲಿ ಕರಪತ್ರ ಹಂಚಿಕೆ ಮೊದಲಾದ ಮಾರ್ಗದ ಮೂಲಕ ಜನಾಂಗದವರನ್ನು ಜಾಗೃತಿಗೊಳಿಸಬೇಕಾಗಿದೆ.
ಎಲ್ಲರೊಂದಿಗೆ ಸಹಬಾಳ್ವೆ:
ಸಮಾಜದಲ್ಲಿ ಎಲ್ಲಾ ಜನಾಂಗದವರೊಂದಿಗೂ ಸಹಬಾಳ್ವೆ ನಡೆಸಬೇಕಾಗಿದೆ. ವಿದ್ಯೆ, ಸನ್ನಡತೆಯ ಮೂಲಕ ಎಲ್ಲರ ಮನಗೆಲ್ಲಬೇಕು. ವೃಥಾ ಜಾತಿ ನಿಂದನೆ ಮೊದಲಾದ ಪ್ರಕರಣಗಳನ್ನು ದಾಖಲಿಸುವುದನ್ನು ಬಿಟ್ಟು ವಿಶ್ವಾಸಗಳಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಎಲ್ಲಾ ಜನಾಂಗದವರಲ್ಲೂ ಬಡವರು,ದಲಿತರು ಇದ್ದಾರೆ. ಅವರವರ ಜಾತಿಯ ಜತೆಗೆ ಅವರ ಆರ್ಥಿಕ ಸ್ಥಿತಿಯನ್ನು ನಮೂದಿಸಿದರೆ ಭವಿಷ್ಯದಲ್ಲಿ ಸರ್ಕಾರವು ಅಂತಹ ಜಾತಿಯಲ್ಲಿರುವ ಬಡವರಿಗಾಗಿ ಯೋಜನೆಗಳನ್ನು ರೂಪಿಸಲಿದೆ. ಇದರಿಂದ ಮುಂದಿನ ಪೀಳಿಗೆಗೆ ಪ್ರಯೋಜನವಾಗಲಿದೆ ಎಂದು ಅವರು ಜಾತಿಗಣತಿಯ ಅನುಕೂಲಗಳನ್ನು ಕುರಿತು ವಿವರಿಸಿದರು.
- ಕರುನಾಡ ಕಂದ
