ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕ ಪಂಚಾಯತ ಸಭಾಂಗಣದಲ್ಲಿ ಇಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ “ವಿಶೇಷ ಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಣಾ ಅಭಿಯಾನ” ಪ್ರಯುಕ್ತ ತಾಲೂಕ ಮಟ್ಟದ ಕಾರ್ಯಾಗಾರವನ್ನು ಏರ್ಪಡಿಸಿ ಉದ್ಯೋಗ ಚೀಟಿ ಪಡೆದಿರುವ 896 ವಿಶೇಷ ಚೇತನರಿಗೆ ವಿಶೇಷ ಜಾಬ್ ಕಾರ್ಡ ನೀಡುವ ಮೂಲಕ ಖಾತ್ರಿ ಕೆಲಸಕ್ಕೆ ಬನ್ನಿ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಕಿರಣ ಘೋರ್ಪಡೆ ಸಸಿಗೆ ನೀರುಣಿಸಿ ಕರೆ ನೀಡಿದರು.
ಮುಂದುವರೆದು ನರೇಗಾ ಯೋಜನೆಯು ಪ್ರತಿಯೊಬ್ಬ ಅರ್ಹ ಕೂಲಿಕಾರನ ಬಾಳಿಗೆ ಬೆಳಕಾಗಿ ನಿಂತಿದೆ ಇದರಿಂದ ಕೌಟುಂಬಿಕ ನಿರ್ವಹಣೆ ಹಾಗೂ ಆರ್ಥಿಕ ಸದೃಡತೆಯನ್ನು ಕಾಣುವಂತಾಗಿದೆ ಕಾರಣ ಎಷ್ಟೋ ಜನ ವಿದ್ಯಾವಂತರಿಗೂ ಸಹ ಇಂದು ಕೆಲಸವಿಲ್ಲದೆ ಪರದಾಡುವ ಸ್ಥಿತಿ ಎದುರಾಗುತ್ತಿದೆ ಅಂತಹದರಲ್ಲಿ ನರೇಗಾ ಯೋಜನೆಯು ನಿಮ್ಮಂತಹ ವಿಶೇಷ ಚೇತನರ ಬಾಳಿನಲ್ಲಿ ಬೆಳಕನ್ನು ಚೆಲ್ಲಲು ಕನಸು ಕಾಣುತ್ತಿದೆ ಆದ್ದರಿಂದ ತಾವುಗಳು ವಿಶೇಷ ಉದ್ಯೋಗ ಚೀಟಿ ಪಡೆದುಕೊಂಡು ಆರ್ಥಿಕ ವರ್ಷದಲ್ಲಿ 100 ದಿನಗಳನ್ನು ಪೂರೈಸಿದರೆ ನಿಮಗೆ 37000/- ರೂಗಳ ವರೆಗೆ ಕೂಲಿ ಹಣ ಸಿಗುತ್ತದೆ ಎಂದರು.
ಒಂದು ಕುಟುಂಬದಲ್ಲಿ ಜಂಟಿಯಾಗಿರುವ ವ್ಯಕ್ತಿಗಳನ್ನು ಏಪ್ರಿಲ್ ಮಾಹೆಯಲ್ಲಿ ಜಾಬ್ ಕಾರ್ಡ್ ವಿಂಗಡಣೆಯನ್ನು ಇದೇ ಅಭಿಯಾನದಲ್ಲಿ ಹಮ್ಮಿಕೊಂಡಿದ್ದು ಇದರಿಂದ ಪ್ರತಿ ಕುಟುಂಬಕ್ಕೂ 100 ದಿವಸ ಕೆಲಸ ದೊರೆಯುತ್ತದೆ ಮತ್ತು ವಿಶೇಷ ಚೇತನರಿಗೂ ಸಹ ವಿಶೇಷ ವರ್ಗದಡಿಯಲ್ಲಿ 100 ದಿವಸ ದೊರಕುತ್ತದೆ ಎಂದರು.
ತದನಂತರ ತಾಪಂ ಸಹಾಯಕ ನಿರ್ದೇಶಕರು (ಗ್ರಾ.ಉ) ವಿಜಯ ಪಾಟೀಲ ಮಾತನಾಡಿ ಸದರಿ ಆರ್ಥಿಕ ವರ್ಷ ಸನ್ 2025-26 ನೇ ಸಾಲಿಗೆ ಜಿಲ್ಲಾ ಕಾರ್ಮಿಕ ಆಯವ್ಯಯದ ಪ್ರಾತ್ಯಕ್ಷಿಕೆಗಳಲ್ಲಿ ಮಾನವ ದಿನಗಳ ಗುರಿ ಒಟ್ಟು 7.60 ಲಕ್ಷ ನಿಗಧಿಪಡಿಸಿದ್ದು ಆದ್ದರಿಂದ ತಾಲೂಕಿನಲ್ಲಿ ಒಟ್ಟು ನೊಂದಾಯಿತ ಕುಟುಂಬಗಳು 52277 ಇದರಲ್ಲಿ ಕ್ರಿಯಾಶೀಲ ಕುಟುಂಬಗಳು 23163 ಇದ್ದು ಅದರಲ್ಲಿ 1938 ವಿಶೇಷ ಚೇತನರಿಗೆ ವಿಶೇಷ ಜಾಬ್ ಕಾರ್ಡ್ ಗಳನ್ನು ಈಗಾಗಲೇ ವಿತರಣೆ ಮಾಡಿರುತ್ತೇವೆ ಆದ್ದರಿಂದ ಯಾವುದೇ ಕಾರಣಕ್ಕೂ ಯಾರೂ ಸಹ ವಲಸೆ ಹೋಗದೇ ಇದ್ದೂರಲ್ಲೇ ಉದ್ಯೋಗ ಖಾತ್ರಿಗೆ ಬೇಡಿಕೆ ಸಲ್ಲಿಸಿ ಬಂದಿರುವ ಬೇಡಿಕೆಯ ಪ್ರಕಾರ ಪ್ರಥಮಾದ್ಯತೆಯ ಮೇರೆಗೆ ವಿಶೇಷ ಚೇತನರಿಗೆ ಕೆಲಸವನ್ನು ನೀಡಲಾಗುವುದು ಎಂದು ತಿಳಿಸಿದರು.
ತಾಲೂಕಿನ ಪುನರ್ವಸತಿ ಕಾರ್ಯಕರ್ತರ ಕೆಲಸವನ್ನು ಗುರುತಿಸಿ ಪ್ರಶಂಸನಾ ಪತ್ರವನ್ನು ನೀಡುವ ಮೂಲಕ ಅವರನ್ನು ಅಭಿನಂದಿಸಿದರು ತದನಂತರ ಎಲ್ಲಾ ವಿಶೇಷ ಚೇತನರಿಗೆ ಸಾಮೂಹಿಕವಾಗಿ ಉದ್ಯೋಗ ಚೀಟಿ ನೀಡುವ ಮೂಲಕ ಖಾತ್ರಿ ಕೆಲಸಕ್ಕೆ ಬನ್ನಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕ ಪಂಚಾಯತ ವ್ಯವಸ್ಥಾಪಕರು ಎ ಎನ್ ಮಿಜ್ಜಿ, ತಾ.ಪಂ ಐಇಸಿ ಸಂಯೋಜಕ ಎಸ್ ವ್ಹಿ ಹಿರೇಮಠ, ತಾ.ಪಂ ಎಮ್ ಆರ್ ಡಬ್ಲ್ಯೂ ಫಕ್ಕೀರಗೌಡ ಪಾಟೀಲ ತಾ.ಪಂ ತಾಂತ್ರಿಕ ಸಂಯೋಜಕ ನಾಗರಾಜ್ ಯರಗುದ್ದಿ, ತಾ.ಪಂ ಎಮ್ ಐ ಎಸ್ ಸಂಯೋಜಕ ಎಮ್ ಬಿ ಶಿವಾಪೂರ ಹಾಗೂ ತಾಲೂಕಿನ ಎಲ್ಲಾ ಗ್ರಾಮೀಣ ಪುನರ ವಸತಿ ಕಾರ್ಯಕರ್ತರು ಹಾಗೂ ವಿಶೇಷ ಚೇತನರು ಈ ಕಾರ್ಯಾಗಾರದಲ್ಲಿ ಹಾಜರಿದ್ದರು.
ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಎಸ್. ವ್ಹಿ. ಹಿರೇಮಠ ಮಾಡಿದರು.
ವರದಿ : ಭೀಮಸೇನ ಕಮ್ಮಾರ
