
ಬಳ್ಳಾರಿ / ಕಂಪ್ಲಿ : ಇಂದು ಹನುಮ ಜಯಂತಿ. ಪಟ್ಟಣದ ಕೋಟೆಯಲ್ಲಿ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಸಂಭ್ರಮ ಸಡಗರದಿಂದ ಹನುಮ ಜಯಂತಿಯನ್ನು ಆಚರಣೆ ಮಾಡಿದರು.
ದೇವಸ್ಥಾನದ ಹಿನ್ನೆಲೆ :
ಜನರ ಇಷ್ಟಾರ್ಥಗಳನ್ನು ಈಡೇರಿಸುವ ಇಲ್ಲಿನ ಕೋಟೆ ಹೊಳೆ ಆಂಜನೇಯ ದೇಗುಲ ಜಾಗೃತ ಕ್ಷೇತ್ರವಾಗಿದ್ದು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ.
ಕಂಪ್ಲಿಯ ಕಾಯಕ ನಿಷ್ಠೆ ಹರಿ ಸರ್ವೋತ್ತಮ ಎನ್ನುವ ದೃಢ ನಂಬಿಕೆಯ ಮಡಿವಾಳನೊಬ್ಬ ಕೋಟೆಯ ತುಂಗಭದ್ರ ನದಿಯಲ್ಲಿನ ಕಲ್ಲು ಬಂಡೆ ಒಂದಕ್ಕೆ ದಿನಾಲು ಬಟ್ಟೆಗಳನ್ನು ತೊಳೆಯುತ್ತಿದ್ದ ಒಂದು ದಿನ ಈ ಮಡಿವಾಳನ ಕನಸಿನಲ್ಲಿ ಆಂಜನೇಯ ಸ್ವಾಮಿ ಬಂದು ದಿನವೂ ನದಿಯಲ್ಲಿ ಬಟ್ಟೆ ಒಗೆಯುವ ಕಲ್ಲು ಬಂಡೆಯಲ್ಲಿ ನಾನಿದ್ದೇನೆ ಎಂದು ತಿಳಿಸಿದ್ದಾರೆ. ಅಚ್ಚರಿಗೊಂಡ ಮಡಿವಾಳ ಕಲ್ಲು ಬಂಡೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿ, ಅದು ಬೋರಲಾಗಿ ಬಿದ್ದಿರುವುದು ತಿಳಿಯಿತು. ಇದನ್ನು ಸರಿಪಡಿಸಿ ನೋಡಿದಾಗ ಆಂಜನೇಯ (ವಾಯು ದೇವರ) ಸ್ವಾಮಿಯ ಮೂರ್ತಿ ರೂಪುಗೊಂಡಿತ್ತು. ಮಡಿವಾಳ ಸದ್ಭಕ್ತರ ಸಹಾಯದಿಂದ ಸಹಕಾರದಿಂದ ನದಿಯಲ್ಲಿನ ವಾಯುದೇವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ ಎನ್ನುವ ಪ್ರತೀತಿ ಇಲ್ಲಿನ ಜನರಲ್ಲಿದೆ. ಈ ಸುಂದರ ಆಂಜನೇಯ ಸ್ವಾಮಿ ದೇಗುಲ ದೇಗುಲದ ಆವರಣದಲ್ಲಿ ಧರ್ಮಶಾಲೆಯನ್ನು ಕಟ್ಟಲಾಗಿದೆ. ಆದರೆ ಇದು ಯಾವಾಗ ಕಟ್ಟಿಸಿದರು ಎಂದು ಸರಿಯಾಗಿ ತಿಳಿದುಬಂದಿಲ್ಲ ಈ ಆಂಜನೇಯ ಸ್ವಾಮಿಗೆ ಕೇವಲ ಭಕ್ತಿಯ ನಮಸ್ಕಾರ ಪ್ರದಕ್ಷಿಣೆ ಪೂಜೆ ಮಾಡಿದರೆ ಸಾಕು ಸಕಲ ಇಷ್ಟಾರ್ಥಗಳು ಈಡೇರುತ್ತವೆ ಎಂಬ ಭಕ್ತರ ನಂಬಿಕೆ ಇದೆ. ಮೂರ್ಛೆರೋಗ ಸೇರಿದಂತೆ ನಾನಾ ರೋಗಗಳು ವಾಸಿಯಾದ ಬಗ್ಗೆ ಇಲ್ಲಿನ ಭಕ್ತಾದಿಗಳು ಹೇಳುತ್ತಾರೆ ಪ್ರತಿ ಶನಿವಾರ ಪಟ್ಟಣ ಸೇರಿದಂತೆ ಸಮೀಪದ ಗ್ರಾಮಗಳ ಜನ ದೇಗುಲಕ್ಕೆ ಬಂದು ವಿಶೇಷ ಪೂಜೆ ಮಾಡಿ ಕಷ್ಟ ಕಾರ್ಪಣ್ಯಗಳನ್ನು ಕಳೆಯಲು ಪ್ರಾರ್ಥಿಸುತ್ತಾರೆ.
ಭಕ್ತಾದಿಗಳು ಹೇಳುವಂತೆ :
ಹೊಳೆ ಆಂಜನೇಯ ಸ್ವಾಮಿಗೆ ಭಕ್ತಿಯಿಂದ ಬೇಡಿದವರ ಇಷ್ಟಾರ್ಥಗಳನ್ನು ಈಡೇರಿಸಿದ್ದಾರೆ ಎನ್ನುವ ನಂಬಿಕೆ ಜನರಲ್ಲಿದೆ ಪ್ರತಿ ಶನಿವಾರ ಮತ್ತು ವಿಶೇಷ ದಿನಗಳಲ್ಲಿ ಭಕ್ತರು ದೇಗುಲಕ್ಕೆ ಬಂದು ವಿಶೇಷ ಪೂಜೆ ಮಾಡಿಸುತ್ತಾರೆ ಅದರಲ್ಲೂ ಇಂದು ಶ್ರೀ ಹನುಮ ಜಯಂತಿ ಹಾಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ತಿಳಿಸಿದರು.
ಇಂದು ಶನಿವಾರವಾದ್ದರಿಂದ ಬೆಳಗ್ಗೆಯಿಂದಲೇ ಆಂಜನೇಯನ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗುಂಡಪ್ಪ ಆಚಾರ್ ಇವರ ನೇತೃತ್ವದಲ್ಲಿ ವಿಶೇಷ ಪೂಜೆಗಳು ಪಲ್ಲಕ್ಕಿ ಉತ್ಸವ ನೆರವೇರಿದವು. ಹನುಮ ಜಯಂತಿ ಪ್ರಯುಕ್ತ ದೇವಸ್ಥಾನ ಹಾಗೂ ದೇವರನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿದ್ದು ಜನ ದೇವರ ದರ್ಶನ ಪಡೆದು ಪುನೀತರಾದರು.
ಹನುಮ ಜಯಂತಿಯ ಪ್ರಯುಕ್ತ ಪ್ರಸಾದ ವ್ಯವಸ್ಥೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಊರಿನ ಗುರು ಹಿರಿಯರು ಭಕ್ತಾದಿಗಳು ಭಾಗವಹಿಸಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
