
ಬಳ್ಳಾರಿ / ಕಂಪ್ಲಿ : ನಗರದ ಶುಗರ್ ಫ್ಯಾಕ್ಟರಿಯಲ್ಲಿರುವ ಸಹಾಯಮಾತೆ ದೇವಾಲಯದಲ್ಲಿ (ಚರ್ಚಿನಲ್ಲಿ) ಶುಭ ಶುಕ್ರವಾರ ( ಗುಡ್ ಫ್ರೈಡೆ) ಆಚರಿಸಲಾಯಿತು.
ಏಸು ಮನುಷ್ಯನ ಪಾಪ ಪರಿಹಾರಕ್ಕಾಗಿ ತನ್ನನ್ನು ತಾನೇ ಬಲಿಯಾಗಿ ಸಮರ್ಪಿಸಿಕೊಂಡನು. ತಾನು ಶಿಲುಬೆಯಲ್ಲಿ ಪ್ರಾಣ ಬಿಡುವಾಗ ಆಡಿದ 7 ಮಾತುಗಳನ್ನು ಪ್ರತಿಯೊಬ್ಬರು ಸ್ಮರಿಸಬೇಕು’ ಎಂದು ಧರ್ಮ ಕೇಂದ್ರದ ( ಚರ್ಚ್ನ) ಗುರುಗಳಾದ ಫಾ. ಸುನಿಲ್ ಭೋದಿಸಿದರು. ‘ಸಮಾಜದಲ್ಲಿ ಕೊಲೆ, ಸುಲಿಗೆ, ವ್ಯಭಿಚಾರ ಹೆಚ್ಚಾಗಿದೆ. ಮತ್ತೊಬ್ಬರ ಹಿತ ಕಾಯುವ ವ್ಯಕ್ತಿಗಳು ಸಿಗುವುದೇ ಕಡಿಮೆ. ಇಂತಹ ಸ್ಥಿತಿಯಲ್ಲಿ ಯೇಸು ತನ್ನ ಪ್ರಾಣ ಹೋಗುತ್ತಿರುವಾಗಲೂ ಮನುಷ್ಯನನ್ನು ಕ್ಷಮಿಸಿದ ವಿಷಯ ಗಂಭೀರವಾದದ್ದು’ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾದ ಫಾ. ಅಂತಯ್ಯರವರು ಶುಭ ಶುಕ್ರವಾರದ ಮಹತ್ವ ಪ್ರಭು ಯೇಸುವಿನ ಪ್ರಾಣತ್ಯಾಗ ರಕ್ಷಣೆಯ ಬಗ್ಗೆ ಧ್ಯಾನಿಸಲು ಹಾಗೂ ಪ್ರಭು ಯೇಸು ಶಿಲುಬೆಯಿಂದ ತೋರಿದ ಪ್ರೀತಿ ಕ್ಷಮೆಯ ಜೀವನವನ್ನು ನಮ್ಮದಾಗಿಸಿಕೊಂಡು ಜೀವಿಸಲು ಕರೆನೀಡಿದರು.
ಶಿಲುಬೆಯನ್ನು ಹಿಡಿದುಕೊಂಡ ಭಕ್ತಾದಿಗಳು ಮಂಡಿಯೂರಿ ಅಥವಾ ಚುಂಬಿಸುವ ಮೂಲಕ ಕ್ರಿಸ್ತನ ತ್ಯಾಗದ ಗೌರವದ ಸಂಕೇತವಾಗಿ ಪೂಜಿಸಿದರು.
ಕ್ರಿಸ್ತನ ಶಿಲುಬೆಗೇರಿಸುವಿಕೆಯ ಪಾಪಗಳ ಕ್ಷಮೆಗಾಗಿ ಮತ್ತು ಎಲ್ಲಾ ವಿಶ್ವಾಸಿಗಳಿಗೆ ಶಾಶ್ವತ ಜೀವನದ ಭರವಸೆಗಾಗಿ ಒಂದು ತ್ಯಾಗವಾಗಿತ್ತು. ಈ ದಿನದ ಬಗ್ಗೆ ಆಚರಣೆಯ ಬಗ್ಗೆ ಕ್ರಿಸ್ತನು ಅನುಭವಿಸಿದ ನೋವು ಮತ್ತು ಆತನ ತ್ಯಾಗದ ಆಳವಾದ ಮಹತ್ವವನ್ನು ಭಕ್ತಾದಿಗಳು ಪ್ರಸ್ತುತಪಡಿಸಿದರು.
ನಂತರ ಭಕ್ತಾದಿಗಳು ಪ್ರಾರ್ಥನೆಯನ್ನು ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬೈಬಲ್ ಓದುವುದು, ಸ್ತುತಿಗೀತೆಗಳನ್ನು ಹಾಡುವುದು ಮತ್ತು ಯೇಸುವಿನ ತ್ಯಾಗವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಧರ್ಮ ಕೇಂದ್ರದ ಯುವಕರು ಮತ್ತು ಸಮಸ್ತ ಭಕ್ತಾದಿಗಳು ಪಾಲ್ಗೊಂಡಿದ್ದರು.
ವರದಿ ಜಿಲಾನಸಾಬ್ ಬಡಿಗೇರ್
