
ಹಾಳು ಬಿದ್ದು, ಪುಂಡರ ಅಡ್ಡೆಯಾಗಿರುವ ಟೌನ್ ಹಾಲ್ ಸರ್ಕಾರಿ ಕಚೇರಿಗೆ ಬಳಸಿಕೊಳ್ಳಿ: ಗದ್ದಿಗಿ ಆಗ್ರಹ
ಯಾದಗಿರಿ: ಗುರುಮಠಕಲ್ ಪಟ್ಟಣದ ತಹಶಿಲ್ದಾರ ಕಚೇರಿ ಪಕ್ಕದಲ್ಲಿರುವ ಪುರಭವನ (ಟೌನ್ ಹಾಲ್) ಕಟ್ಟಡ ಬಳಕೆ ಇಲ್ಲದೇ ಹಾಳು ಬಿದ್ದಿದ್ದು ಪುಂಡ ಪೋಕರಿಗಳಿಗೆ ಅಡ್ಡಯಾಗಿ ಪರಿವರ್ತನೆಗೊಂಡಿದ್ದು, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜಯಕರ್ನಾಟಕ ಸಂಘಟನೆ ಒತ್ತಾಯಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ತಾಲ್ಲೂಕು ಅಧ್ಯಕ್ಷ ನಾಗೇಶ ಗದ್ದಿಗಿ, 2016-17ನೇಸಾಲಿನಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ಅಂದಾಜು 1.90 ಕೋಟಿ ಗೂ ಹೆಚ್ಚು ಖರ್ಚು ಮಾಡಿ ನಿರ್ಮಿಸಿದ ಕಟ್ಟಡ ವ್ಯರ್ಥವಾಗಿ ಹಾಳಾಗಿ ಪುಂಡ ಪೋಕರಿಗಳಿಗೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ರಾತ್ರಿಯಾದರೆ ಸಾಕು ಕುಡುಕರ ಅಡ್ಡೆಯಾಗಿ ಬದಲಾಗುವ ಟೌನ್ ಹಾಲ್ ಅಕ್ರಮ ಅನೈತಿಕ ನೈಟ್ ಕ್ಲಬ್ ಆಗಿ ಬದಲಾಗಿದೆ, ಈ ಕಟ್ಟಡದ ಕಿಟಕಿ ಬಾಗಿಲುಗಳನ್ನು ಧ್ವಂಸ ಮಾಡಿರುವ ಕುಡುಕರು ಕಟ್ಟಡವನ್ನು ಭೂತ ಬಂಗ್ಲೆಯಾಗಿ ಪರಿವರ್ತಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಕೂಡಲೇ ಕ್ರಮ ಕೈಗೊಂಡು ಈ ಕಟ್ಟಡವನ್ನು ಯಾವುದಾದರೂ ಸರ್ಕಾರಿ ಕಚೇರಿಯನ್ನಾಗಿ ಬದಲಿಸಬೇಕು ಸರ್ಕಾರದ ಹಣ ವ್ಯರ್ಥವಾಗುತ್ತಿದೆ.
ಈ ಹಿಂದೆ ತಾಲ್ಲೂಕು ನ್ಯಾಯಾಲಯ ಸಂಕೀರ್ಣವಾಗಿಸಲು ಬಿಡುಗಡೆಮಾಡಿದ 50 ಲಕ್ಷ ರೂ. ಗಳನ್ನು ಪಾಪಸ್ ಪಡೆದಿದ್ದರಿಂದ ಮತ್ತೆ ಈ ಕಟ್ಟಡ ಹಾಳು ಕೊಂಪೆಯಂತಾಗಿದೆ.
ತಾಲ್ಲೂಕು ಕೇಂದ್ರದಲ್ಲಿ ಕಚೇರಿಗಳು ಇಲ್ಲ ಎಂಬ ಸಬೂಬು ಹೇಳುವ ಸರ್ಕಾರ ಇಂತಹ ಕಟ್ಟಡಗಳನ್ನು ಬಳಸಿಕೊಂಡು ಇಲಾಖೆಗಳ ಕಚೇರಿ ಆರಂಭಿಸಲು ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ತಹಶಿಲ್ದಾರರ ಕಚೇರಿ ಪಕ್ಕದಲ್ಲೇ ಇದ್ದರೂ ತಹಶೀಲ್ದಾರ ಸೇರಿದಂತೆ ಯಾವೊಬ್ಬ ಅಧಿಕಾರಿಗಳೂ ಈ ಬಗ್ಗೆ ಯೋಚಿಸದೇ ಇರುವುದು ಅಧಿಕಾರ ನಡೆಸುತ್ತಿರುವವರ ಕಾರ್ಯವೈಖರಿಯನ್ನು ಬಿಂಬಿಸುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಇದಲ್ಲದೇ ಪಟ್ಟಣದ ಹಳೆ ಐ. ಟಿ. ಐ ಕಾಲೇಜು , ಸಾಕಷ್ಟು ಕಟ್ಟಡಗಳು ಉಪಯೋಗಿಸದೇ ಇರುವುದು ಹಾಗೂ ಅವುಗಳ ಕಡೆ ಸಹ ಗಮನ ಕೊಡಬೇಕು, ಕೂಡಲೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಗೌರವಾಧ್ಯಕ್ಷ ಮಲ್ಲಿಕಾರ್ಜುನ ಕಾಕಲವಾರ, ಉಪಾದ್ಯಕ್ಷ ಕಾಶಪ್ಪ ದೊರೆ, ಕಾರ್ಯಾಧ್ಯಕ್ಷ ನರಸಿಂಹಲು, ನಗರಾಧ್ಯಕ್ಷ ಮಹೇಶ ಗೌಡ, ಮುಖಂಡರಾದ ಉದಯಕುಮಾರ, ನಾರಾಯಣ ಮಜ್ಜಿಗೆ, ರಾಮುಲು ಕೊಡಗಂಟಿ, ಅಯಾಜ್, ರವಿ ವಾರದ, ಬನ್ನಪ್ಪ ಮಡಗು, ನರೇಶ ಮಜ್ಜಿಗೆ ಇನ್ನಿತರರು ಎಚ್ಚರಿಕೆ ನೀಡಿದ್ದಾರೆ.
ವರದಿ: ಜಗದೀಶ್ ಕುಮಾರ್
