
ಪರಿಸರ ಮಾಲಿನ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಲುಷಿತ ಗಾಳಿ ಜತೆಗೆ ನಾನಾ ರೋಗಗಳು ಹರಡುತ್ತಿವೆ : ವಿ.ರಾಜಶೇಖರ ಆರೋಪ
ಇಲ್ಲಿನ ಕಾಲೇಜಿನಲ್ಲಿ ವಿ.ರಾಜಶೇಖರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಬಳ್ಳಾರಿ / ಕಂಪ್ಲಿ : ತಾಲೂಕು ಸಮೀಪದ ಕುಡತಿನಿ ಪಟ್ಟಣದ ಹರಗಿನಡೋಣಿ ಬಸವನಗೌಡ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಜಶೇಖರ್ ನೇತೃತ್ವದಲ್ಲಿ ಬಳ್ಳಾರಿ ಎಂಎ ಹಾಸ್ಪಿಟಲ್(ಸೂಪರ್ ಸ್ಪೆಷಾಲಿಟಿ) ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ಜರುಗಿತು.
ನಂತರ ವಿ.ರಾಜಶೇಖರ ಅವರು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಕುಡತಿನಿ ಪಟ್ಟಣದ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿರುವ ಸಾಕಷ್ಟು ಕಾರ್ಖಾನೆಗಳ ಧೂಳು, ಕಲುಷಿತ ಗಾಳಿಯಿಂದ ಕಾರ್ಮಿಕರು ಸೇರಿದಂತೆ ಪಟ್ಟಣ ಜನತೆಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮನುಷ್ಯನ ದೇಹದಲ್ಲಿ ನಾನಾ ರೋಗ ರುಜಿನಗಳು ಕಾಣುವಂತಾಗಿದೆ. ಪರಿಸರ ಮಾಲಿನ್ಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಇಲ್ಲಿನ ಜನರ ಆರೋಗ್ಯ ಹದಗೆಡುತ್ತಿದೆ. ಆದ್ದರಿಂದ ಇಲ್ಲಿನ ಜನರ ಆರೋಗ್ಯದ ಹಿತದೃಷ್ಟಿ ಮತ್ತು ಕಾಳಜಿಯಿಂದ ಪಟ್ಟಣದಲ್ಲಿ ಬಳ್ಳಾರಿಯ ಎಂಎ ಹಾಸ್ಪಿಟಲ್ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಮಾಡಲಾಯಿತು. ಇದರ ಸದುಪಯೋಗ ಪಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಈಗಾಗಲೇ 30 ಹಾಸಿಗೆಯ ಆಸ್ಪತ್ರೆ ಕಟ್ಟಡವಾಗುತ್ತಿದ್ದು, ಇದರಿಂದ ಇಲ್ಲಿನ ಜನತೆಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ಈ ಶಿಬಿರದಲ್ಲಿ ಬಿಪಿ, ಶುಗರ್, ಥೈರಾಯಿಡ್, ಹೃದಯ, ಅಸ್ತಮ, ಲಿವರ್, ಎಪಿಲೆಪ್ಸಿ, ಸ್ಟೋಕ್, ಲೆನ್ಸ್ ಸೇರಿದಂತೆ ನಾನಾ ಕಾಯಿಲೆಗಳಿಗೆ ಸಂಬಂಧಿಸಿದಂತೆ ಉಚಿತ ಆರೋಗ್ಯ ತಪಾಸಣೆ ನಡೆಸುವ ಜತೆಗೆ ಉಚಿತವಾಗಿ ಔಷಧ ವಿತರಿಸಲಾಯಿತು. 500ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಗೆ ಒಳಪಟ್ಟರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯ ಜಿ.ಎಸ್.ವೆಂಕಟರಮಣಬಾಬು, ಎಂಎ ಹಾಸ್ಪಿಟಲ್ ವೈದ್ಯಾಧಿಕಾರಿಗಳಾದ ಡಾ.ಮಹಮ್ಮದ್ ಎಂಜೆಡ್, ಡಾ.ಮಹಮ್ಮದ್ ಅಬ್ದುಲ್ ಗಫೂರ್, ಡಾ.ಖಲೀಲ್ ಮುಕಿನ್, ಡಾ.ಶಬ್ಬೀರ್ ಅಹ್ಮದ್, ಡಾ.ತನ್ವೀರ್, ಡಾ.ಇಸ್ರತ್ ಫಾತೀಮಾ, ಡಾ.ಷಾರಿಕ್, ಡಾ.ಅನ್ವರ್, ಮುಖಂಡರಾದ ಮಹಾಂತೇಶ, ಪ್ರತಾಪ್, ಅಂಬರೀಶ, ಸಾದಕಲಿ, ಹೊಸ್ಕೇರಿ, ರಮೇಶ, ವಡುಕಪ್ಪ, ಗಂಗಾಧರ, ರಾಮೂರ್ತಿ, ಜಗದೀಶ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
