ಬಳ್ಳಾರಿ: ಕುರುಗೋಡು ತಾಲ್ಲೂಕಿನ ದಮ್ಮೂರು ಮತ್ತು ಸಿಂಧಿಗೇರಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕಾಲುವೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ರೋಜ್ ಗಾರ್ ದಿವಸ್ ಅನ್ನು ಸೋಮವಾರ ಆಚರಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೇರ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸುವ ಅಭಿವೃದ್ಧಿ ಹಾಗೂ ಗುಳೆ ತಪ್ಪಿಸಲು ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ನರೇಗಾ ಯೋಜನೆ ರೂಪಿಸಲಾಗಿದೆ. ನರೇಗಾದಿಂದ ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಹಲವು ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯ ಯಶಸ್ವಿಗೆ ಕಾರ್ಮಿಕರ ಶ್ರಮವೇ ಮೂಲಾಧಾರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೂಲಿ ಕೆಲಸಕ್ಕೆ ಹಾಜರಾದವರಿಗೆ ಮಾತ್ರ ಹಾಜರಾತಿ ನೀಡಬೇಕು. ಹಿರಿಯ ನಾಗರಿಕರಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ, ವಿಶೇಷ ಚೇತನರಿಗೆ ಅರ್ಧದಷ್ಟು ಕೆಲಸ ನೀಡುವಂತೆ ಮಾಹಿತಿ ನೀಡಿದರು.
ಮನರೇಗಾ ಯೋಜನೆಯಡಿ ಕನಿಷ್ಠ ಶೇ.60 ಮಹಿಳೆಯರು ಭಾಗವಹಿಸುವಿಕೆ, ಹಾಜರಾತಿ ಕುರಿತು ತಿಳಿಸಿದರು. ನಾಲಾ ಹೂಳೆತ್ತುವ ಕಾಮಗಾರಿಯ ಅಳತೆಯ ಕುರಿತು ವಿವರಿಸಿದ ಅವರು, ಮಹಿಳಾ ಕಾರ್ಮಿಕರು ಕೂಸಿನ ಮನೆಯ ಸದುಪಯೋಗ ಪಡೆಯಬೇಕು ಎಂದರಲ್ಲದೇ, ಪಿಎಂಜೆಜೆವೈ ಮತ್ತು ಪಿಎಂಎಸ್‌ಬಿವೈ ವಿಮಾ ಯೋಜನೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕುರುಗೋಡು ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ನಿರ್ಮಲ, ಸಹಾಯಕ ನಿರ್ದೇಶಕ ಪಿ.ಶಿವರಾಮರೆಡ್ಡಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಸೇರಿದಂತೆ ಗ್ರಾಪಂ ಕಾರ್ಯದರ್ಶಿ, ತಾಂತ್ರಿಕ ಸಂಯೋಜಕರು, ಐ.ಇ.ಸಿ ಸಂಯೋಜಕರು, ತಾಂತ್ರಿಕ ಸಹಾಯಕರು ಬಿ.ಎಫ್.ಟಿ, ಗ್ರಾ.ಪಂ ಸಿಬ್ಬಂಧಿಯವರು ಹಾಜರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ
