ಬೆಳಗಾವಿ/ ಬೈಲಹೊಂಗಲ: ನಾಡು-ನುಡಿ ರಕ್ಷಣೆಯಲ್ಲಿ ಕನ್ನಡ ಸಂಘಟನೆಗಳು ಸದಾ ಕ್ರಿಯಾ ಶೀಲರಾಗಿರಬೇಕೆಂದು ಹಣ್ಣಿಕೇರಿ ಹಿರೇಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಅವರು ನೂತನವಾಗಿ ಅಸ್ತಿತ್ವಕಕ್ಕೆ ಬಂದಿರುವ ಕನ್ನಡ ಪರ ಯುವ ಸಂಘಟನೆಯಾದ ಕರ್ನಾಟಕ ಯುವ ರಕ್ಷಣಾ ವೇದಿಕೆಯ ತಾಲೂಕಾ ಘಟಕದ ಉದ್ಘಾಟನಾ ಸಮಾರಂಭ, ಕನ್ನಡ ಹಬ್ಬ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡದ ಕಣ್ಮಣಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಸಂಘಟನೆಗಳು ಜನಪರವಾಗಬೇಕು, ನೊಂದವರ ಧ್ವನಿಯಾಗಿ ಸ್ವಾರ್ಥ ಬಯಸದೇ ನಿಸ್ವಾರ್ಥತೆಯಿಂದ ಸಮಾಜದ ಮನ ಗೆಲ್ಲಬೇಕು, ಸಂಘಟನೆಗಳು ಸದಾ ಜೀವಂತ ಇರಬೇಕಾದರೆ ಸದಸ್ಯರಲ್ಲಿ ಒಕ್ಕಟ್ಟು ಕಾಯ್ದುಕೊಳ್ಳಬೇಕೆಂದರು.
ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಡಾ. ಮಹಾಂತೇಶ ಶಾಸ್ತ್ರಿ ಆರಾದ್ರಿಮಠ ಸಾನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿ ತಮ್ಮ ಹಕ್ಕುಗಳನ್ನು ಪಡೆಯಲು ಕೆಲವೊಂದು ಬಾರಿ ಹೋರಾಟಗಳು ಅನಿವಾರ್ಯವಾಗುತ್ತದೆ. ಹೀಗಾಗಿ ಕರುನಾಡಿಗೆ ಕಂಟಕ ಬಂದಾಗ ಕನ್ನಡ ಪರ ಸಂಘಟನೆಗಳ ಪಾತ್ರ ಅತ್ಯವಶ್ಯವಾಗಿದೆ. ಜನರ ಸಮಸ್ಯಗಳನ್ನು ಆಲಿಸಲು ಪ್ರತಿನಿಧಿಸುವ ಇದೊಂದು ವೇದಿಕೆಯಾಗಿದ್ದು ಸಂಘಟನೆಯ ಯುವಕರು ಯಾವೂದಕ್ಕೂ ಬಲಿಪಶು ಆಗದೇ ನಾಡಿನ ಜನರ ಉದ್ದಾರಕ್ಕಾಗಿ ಶ್ರಮಿಸಬೇಕು. ಸಂಘಟನೆಯ ಮುಖ್ಯಸ್ಥ ಪ್ರತಿಯೊಬ್ಬ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಕಾರ್ಯನಿರ್ವಹಿಸಬೇಕೆಂದರು.
ಸಂಘಟನೆಯ ರಾಜ್ಯಾಧ್ಯಕ್ಷ ಸುನೀಲ ಎಂ. ಎಸ್. ರಾಜ್ಯ ಉಪಾಧ್ಯಕ್ಷ ಡಾ. ಮಹಾಂತೇಶ ಕೂಲಿನವರ, ಕಾರ್ಯಾಧ್ಯಕ್ಷ ಪ್ರಭಾಕರ ಆರ್, ಜಿಲ್ಲಾಧ್ಯಕ್ಷ ನಾಗೇಶ ಫಕ್ಕೀರಣ್ಣವರ, ತಾಲೂಕಾ ಗೌರವಾಧ್ಯಕ್ಷ ಬಾಳನಗೌಡಾ ಪಾಟೀಲ, ತಾಲೂಕಾಧ್ಯಕ್ಷ ರಾಚಪ್ಪ ಪಾಟೀಲ, ಬೆಳವಡಿಯ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಚೇರಮನ್ ಬಸವರಾಜ ಬಾಳೇಕುಂದರಗಿ, ಮಾಜಿ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ತುರಮರಿ, ಚಿತ್ರನಟ ರಮೇಶ ಪರವಿನಾಯ್ಕರ, ಮುಖಂಡ ಉಮೇಶ ಬೋಳೆತ್ತಿನ, ಕನ್ನಡ ಪರ ಹೋರಾಟಗಾರ ರಾಜು ಕುಡಸೋಮನ್ನವರ, ಸುಭಾಶ ತುರಮರಿ, ಡಾ. ಎ. ಎಂ. ಬಾಗೇವಾಡಿ, ಡಾ. ತೌಶೀಪ್ ಸಂಗೊಳ್ಳಿ, ಜಿಲ್ಲಾ ಉಪಾಧ್ಯಕ್ಷರಾದ ಆನಂದ ಬೈಲಪ್ಪನವರ, ಈರಪ್ಪ ಸಂಪಗಾವಿ, ಶ್ರೀಶೈಲ ವಂಟಮೂರಿ, ಶಾಂತಾ ಮಡ್ಡಿಕಾರ, ಸಿ. ವಾಯ್. ಮೆಣಸಿನಕಾಯಿ, ಮಹಾಂತೇಶ ರಾಜಗೋಳಿ, ನ್ಯಾಯವಾದಿ ಶಾಂತಾ ಸಿದ್ರಾಮನ್ನವರ, ತಾಲೂಕಾಧ್ಯಕ್ಷ ರಾಚಪ್ಪ ಪಾಟೀಲ, ಯರಡಾಲ ಪಿಕೆಪಿಎಸ್ ಅಧ್ಯಕ್ಷ ಈರಣ್ಣ ವಾರದ , ಕರ್ನಾಟಕ ಯುವ ರಕ್ಷಣಾ ವೇದಿಕೆಯ ಜಿಲ್ಲಾ ಹಾಗೂ ತಾಲೂಕಾ ಸಂಘಟನೆಯ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ರಾಣಿ ಚೆನ್ನಮ್ಮ ವೃತ್ತದಿಂದ ಕಾರ್ಯಕ್ರಮದ ಸ್ಥಳದವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ವೀರಮಾತೆ ಚನ್ನಮ್ಮನ ಸಮಾಧಿಗೆ ನಮನ ಸಲ್ಲಿಸಲಾಯಿತು. ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡದ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಹಬ್ಬದ ಅಂಗವಾಗಿ ಕಲಾವಿದರಿಂದ, ವಿದ್ಯಾರ್ಥಿಗಳಿಂದ ಸಾಂಸ್ಕçತಿಕ ಕಾರ್ಯಕ್ರಮಗಳು ಜರುಗಿದವು. ಮಂಗಳಗೌರಿ ಕಲಾಲ್, ನಮೃತಾ ಕಲಾಲ್, ಅಕ್ಕುಬಾಯಿ ಘಾಟಗೆ ಇವರಿಂದ ಭರತ ನಾಟ್ಯ ಜರುಗಿತು.
ತಾಲೂಕಾಧ್ಯಕ್ಷ ರಾಚಪ್ಪ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಪತ್ತಾರ ನಿರೂಪಿಸಿದರು. ಮೌನೇಶ ಪತ್ತಾರ ವಂದಿಸಿದರು.
ವರದಿ. ಭೀಮಸೇನ ಕಮ್ಮಾರ
