ಆಡುವ ಮಾತಿನಲ್ಲಿ
ನೀಡುವ ಪ್ರೀತಿಯಲ್ಲಿ
ಬೆಲ್ಲ ಬೆರೆಸಿಹರು ಗೆಳೆಯ
ಕಹಿ ಹೇಗೆ ಅರಿಯಲಿ
ಹಗೆ ತುಂಬಿ ಮನದಲ್ಲಿ
ಹುಸಿ ಹಾಸ್ಯ ನಗೆಯಲಿ
ವಿಷ ಕಾರುತಿಹರು ಗೆಳೆಯ
ಯಾರೊಂದಿಗೆ ಬೆರೆಯಲಿ
ಸ್ನೇಹಿತರೆಂಬ ಸೋಗಿನಲ್ಲಿ
ಬಂಧಿಸಿ ಬಾಹುವಿನಲ್ಲಿ
ಬೆನ್ನಿಗೆ ಚೂರಿಹಾಕಲು ಗೆಳೆಯ
ನಾನು ಯಾರನ್ನ ಜರಿಯಲಿ
ಕೈ ಹಿಡಿದು ನಡೆಸುತಲಿ
ಕಾಲ್ಹಿಡಿದು ಎಳೆಯುತಲಿ
ಬೀಳಿಸಲೆತ್ನಿಸುತ್ತಿರಲು ಗೆಳೆಯ
ಯಾರೊಂದಿಗೆ ಪಯಣಿಸಲಿ
ಮೋಸವೆಂಬುದು ಎಲ್ಲರಲಿ
ಮನೆ ಮಾಡಿರಲು ಮನದಲಿ
ಇಲ್ಲಿ ನನ್ನವರೆಂದು ಗೆಳೆಯ
ನಾನು ಯಾರನ್ನು ನಂಬಲಿ
- ಸಿದ್ಧರಾಮ ಸಿ ಸರಸಂಬಿ ಕಲಬುರ್ಗಿ
