
ಬೆಳಗಾವಿ :ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರವಾದಿಗಳಿಂದ ನಡೆದ ಪೈಶಾಚಿಕ ದಾಳಿಯಲ್ಲಿ ನಮ್ಮ ರಾಜ್ಯದ ಮೂವರು ಪ್ರವಾಸಿಗರು ಬಲಿಯಾಗಿದ್ದಾರೆ, ಅವರಲ್ಲಿ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನೆಲೆಸಿರುವ ಐಟಿ ಉದ್ಯೋಗಿ ಮಧುಸೂದನ್ ರಾವ್, ಶಿವಮೊಗ್ಗ ಜಿಲ್ಲೆಯ ಮಂಜುನಾಥ ರಾವ್ , ಹಾವೇರಿ ಜಿಲ್ಲೆಯ ಭರತ್ ಭೂಷಣ್ ಅವರು ಉಗ್ರವಾದಿಗಳ ದಾಳಿಗೆ ಬಲಿಯಾಗಿದ್ದಾರೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಸ್ಲಿಂ ಸಮುದಾಯದ ಮುಖಂಡರು ಬುಧವಾರ ಸಂಜೆ ಪಟ್ಟಣದ ಹುತಾತ್ಮ ವೃತ್ತದ ಹತ್ತಿರ ಕ್ಯಾಂಡಲ್ ಮಾರ್ಚ ನಡೆಸಿ ಮೌನ ಆಚರಣೆ ಮಾಡಿ ಹುತಾತ್ಮರಿಗೆ ಶ್ರದ್ದಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಜಾಮಿಯಾ ಮಸ್ಜಿದ್ ಮುಫ್ತಿ ಜಹುರ್ ಹಾಜಿ ಅವರು ಮಾತನಾಡಿ “ ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರಿಂದ ನಡೆದ ನರಮೇಧವು ಅತ್ಯಂತ ಖಂಡನೀಯ. ಕೇಂದ್ರ ಸರ್ಕಾರವು ಆದಷ್ಟು ಬೇಗ ಸೂಕ್ತ ಕ್ರಮಗಳನ್ನು ಕೈಗೊಂಡು ಉಗ್ರವಾದವನ್ನು ಮಟ್ಟ ಹಾಕಬೇಕೆಂದು” ಸರ್ಕಾರಕ್ಕೆ ಒತ್ತಾಯಿಸಿದರು.
ಅಂಜುಮನ್ ಇಸ್ಲಾಂ ಕಮಿಟಿಯ ನಿರ್ದೇಶಕ ಶಫಿ ಬೆಣ್ಣಿ ಮಾತನಾಡುತ್ತಾ ದಾಳಿಯನ್ನು ತೀವ್ರವಾಗಿ ಖಂಡಿಸಿ ಉಗ್ರರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ತಾಲೂಕಾ ಅಂಜುಮನ್ ಹೈಸ್ಕೂಲ್ ಅಧ್ಯಕ್ಷರಾದ ಸಿರಾಗಪುರ, ಬಿಜೆಪಿ ರಾಮದುರ್ಗ ತಾಲೂಕಾ ಅಲ್ಪಸಂಖ್ಯಾತ ಅಧ್ಯಕ್ಷರಾದ ಜಹಿರ ಹಾಜಿ , ಬಿಜೆಪಿ ಮುಖಂಡ ಮುಹಮ್ಮದ್ ಬೇಗ ನಿಗದಿ, HMC ರಾಜ್ಯ ಉಪಾಧ್ಯಕ್ಷರಾದ ಎಂ ಕೆ ಯಾದವಾಡ, ಶಬ್ಬೀರ್ ಪಠಾಣ, ಗುಲಾಮ್ ಸರ್ಕಾಜಿ, ಜಹಿರ್ ಪೆಂಡಾರಿ ಸೇರಿದಂತೆ ಸಮುದಾಯದ ಮುಖಂಡರು ಯುವಕರು ಪಾಲ್ಗೊಂಡಿದ್ದರು.
ವರದಿ: ಅಫ್ತಾಬ ಸರಮುಲ್ಲಾ
