
ಬಳ್ಳಾರಿ / ಕಂಪ್ಲಿ : ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಬಳ್ಳಾರಿ ಲೋಕಾಯುಕ್ತದಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಹಾಗೂ ಸಮಸ್ಯೆಗಳ ಅರ್ಜಿ ಅಹವಾಲು ಸ್ವೀಕಾರ ಕಾರ್ಯಕ್ರಮ ಗುರುವಾರ ಜರುಗಿತು.
ಈ ವೇಳೆ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರು ತಮ್ಮ ಸಮಸ್ಯೆಗಳ ಅಹವಾಲುಗಳನ್ನು ಅರ್ಜಿಗಳ ಮೂಲಕ ಅಳಲು ತೋಡಿಕೊಂಡರು. ಒಂದೊಂದಾಗಿ ಕುಂದು ಕೊರತೆಗಳ ಅರ್ಜಿಗಳನ್ನು ಖದ್ದಾಗಿ ಪರಿಶೀಲಿಸಿ, ಮುಂದಿನ ಕ್ರಮಕ್ಕೆ ಆದೇಶಿಸಿದರು. ತದನಂತರ ಸಿಪಿಐ ನಾಗರೆಡ್ಡಿ ಮಾತನಾಡಿ, ದೇವಲಾಪುರ ಬಳಿಯ ಸುಗ್ಗೇನಹಳ್ಳಿಯ ರಸ್ತೆಯಲ್ಲಿರುವ ಕಲ್ಲು ಕ್ವಾರಿ (ಕಾರ್ಖಾನೆ) ಯಿಂದ ಧೂಳು, ಕಲ್ಲು ಹೊಡೆಯುವುದು ಸೇರಿದಂತೆ ನಾನಾ ಸಮಸ್ಯೆಗಳ ತೊಂದರೆಯಾಗುತ್ತಿದೆ ಎಂದು ರೈತರು ದೂರು ನೀಡಿದ್ದು, ಈಗಾಗಲೇ ಕಲ್ಲು ಕ್ವಾರಿ ಕೆಲಸ ಸ್ಥಗಿತಗೊಳಿಸಿದ್ದು, ಈ ಸಮಸ್ಯೆ ಬಗೆಹರಿಸಬೇಕೆಂದು ಸಂಬಂಧ ಅಧಿಕಾರಿಗೆ ಸೂಚಿಸಲಾಗಿದೆ. ನಂ.10 ಮುದ್ದಾಪುರ ಗ್ರಾಮದಲ್ಲಿ ಮೊಬೈಲ್ ಟವರ್, ವೈನ್ ಶಾಪ್ ಮತ್ತು ಕಂಪ್ಲಿ ನಗರದ ಹಳೆ ಬಸ್ ನಿಲ್ದಾಣ ಬಳಿಯಲ್ಲಿರುವ ವೈನ್ ಶಾಪ್ ಸ್ಥಳಾಂತರಿಸುವಂತೆ ದೂರು ನೀಡಿದ್ದಾರೆ. ಹೀಗೆ ಹಲವು ದೂರುಗಳು ಬಂದಿದ್ದು, ಹಂತ ಹಂತವಾಗಿ ಅರ್ಜಿಗಳ ವಿಲೇವಾರಿ ಮಾಡಲಾಗುವುದು. ಕಂದಾಯ 2, ಭೂ ಸರ್ವೆ ಇಲಾಖೆ, ಶಿಕ್ಷಣ, ಪೊಲೀಸ್ ಇಲಾಖೆಗೆ ತಲಾ 1 ಅರ್ಜಿಗಳು ಸ್ವೀಕಾರವಾಗಿವೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವರಾಜ ಶಿವಪುರ, ತಾಪಂ ಇಒ ಆರ್.ಕೆ.ಶ್ರೀಕುಮಾರ, ಮುಖ್ಯಾಧಿಕಾರಿ ಕೆ.ದುರುಗಣ್ಣ, ಲೋಕಾಯಕ್ತ ಇಲಾಖೆ ಸಿಬ್ಬಂದಿಗಳಾದ ಅಂಜಿನಪ್ಪ, ದಾನಪ್ಪ, ಹೊನ್ನೂರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
