

ಬಳ್ಳಾರಿ / ಕಂಪ್ಲಿ : ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅಗತ್ಯವಾಗಿವೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಬಳ್ಳಾರಿ ಜಿಲ್ಲಾ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ ನೇತೃತ್ವದಲ್ಲಿ ಬಸವ ಜಯಂತಿ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಮೆಟ್ರಿ ಪ್ರೀಮಿಯರ್ ಲೀಗ್- 5ರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಕಂಪ್ಲಿ ತಾಲೂಕಿನಲ್ಲಿ ಸರ್ಕಾರಿ ಜಾಗ ದೊರೆತರೆ, ಕ್ರೀಡಾಪಟುಗಳಿಗಾಗಿ ತಾಲೂಕು ಕ್ರೀಡಾಂಗಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ನಂತರ ಬಳ್ಳಾರಿ ಜಿಲ್ಲಾ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಸಕ ಗಣೇಶ ಅವರು ಕ್ಷೇತ್ರದ ಅಭಿವೃದ್ಧಿಗೆ ಹೆಸರುವಾಸಿಯಾಗಿದ್ದಾರೆ, ಈ ಭಾಗದಲ್ಲಿ ಕ್ರೀಡಾಂಗಣ ನಿರ್ಮಿಸಿಕೊಡಬೇಕು, ಸತತ ಐದನೇ ಬಾರಿಗೆ ಮೆಟ್ರಿ ಪ್ರೀಮಿಯರ್ ಲೀಗ್ ಟೂರ್ನಮೆಂಟ್ ಆಯೋಜಿಸಲಾಗಿದೆ. ಕ್ರೀಡಾಪಟುಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾ ಸ್ಪೂರ್ತಿ ಮೆರೆಯಬೇಕು. ಸೋಲು-ಗೆಲವು ಎನ್ನದೇ ಕ್ರೀಡಾಭಿಮಾನ ಹೊಂದಬೇಕು. ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 21 ಸಾವಿರ ಮತ್ತು ದ್ವಿತೀಯ ಬಹುಮಾನ 11 ಸಾವಿರ ವಿತರಿಸಲಾಗುವುದು ಎಂದರು.
ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯರಾದ ಹೆಚ್.ಶಂಕ್ರಪ್ಪ, ಕೆ.ರಾಜಪ್ಪ, ಹಾಲಿ ಸದಸ್ಯ ಎಂ.ಜಡೆಪ್ಪ, ಮುಖಂಡರಾದ ಎಂ.ತಿಪ್ಪೇಶ, ಹೆಚ್.ಹಂಪಾರೆಡ್ಡಿ, ಹೆಚ್.ಮಂಜುನಾಥ, ಎನ್.ಜಗದೀಶ, ಹೆಚ್.ಶಿವಪುತ್ರಪ್ಪ, ಹೆಚ್.ಗಂಗಾಧರ, ಹರಿಜನ ಗಂಗಾಧರ, ದೇವಲಾಪುರ ರವಿ, ಉಪ್ಪಾರಹಳ್ಳಿ ನಾಗರಾಜ, ಉಪ್ಪಾರಹಳ್ಳಿ ತಿಮ್ಮಪ್ಪ, ಚಿನ್ನಾಪುರ ಗಣೇಶ, ಚಿನ್ನಾಪುರ ಕೊಂಡಪ್ಪ, ಎನ್.ಕನಕಪ್ಪ, ಕೆ.ಶಿವಶರಣ ಸೇರಿದಂತೆ ಗ್ರಾಮಸ್ಥರು ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
