ಬಳ್ಳಾರಿ / ಕಂಪ್ಲಿ : ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಭಟ್ಟ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ಶುಕ್ರವಾರ ನಡೆಯಿತು.
ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪುರಸಭೆಗೆ ಒಳಪಡುವ ಬಿಎಸ್ವಿ ಶಾಲೆಯನ್ನು ಶಾಲಾ ಆಡಳಿತ ಮಂಡಿಳಿಯವರು ತೆರವು ಮಾಡಬೇಕು. ಇಲ್ಲವಾದಲ್ಲಿ ಮೇ.1ರಂದು ಪುರಸಭೆಯಿಂದ ಸಂಪೂರ್ಣವಾಗಿ ತೆರವುಗೊಳಿಸಲು ಇಲ್ಲಿನ ಸಾಮಾನ್ಯ ಸಭೆಯ ಸರ್ವ ಸದಸ್ಯರು ಒಮ್ಮತದ ನಿರ್ಧಾರ ಕೈಗೊಂಡರು ಹಾಗೂ ಕಂಪ್ಲಿ ಪುರಸಭೆಯ 2025-26ನೇ ಸಾಲಿನ ಎಸ್. ಎಫ್. ಸಿ. ಬಂಡವಾಳ ಸೃಜನೆ, ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಯೋಜನೆಯ ಕ್ರಿಯಾ ಯೋಜನೆ, 15 ನೇ ಹಣಕಾಸು ಆಯೋಗದ ನಿರ್ಬಂಧಿತ ಹಾಗೂ ಮುಕ್ತನಿಧಿ ಅನುದಾನ ಯೋಜನೆಯ ಕ್ರಿಯಾ ಯೋಜನೆ ಮತ್ತು ಪುರಸಭೆ ನಿಧಿ ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ., ಶೇ. 7.25 , ಶೇ. 5 ರ ಯೋಜನೆಯ ಕ್ರಿಯಾ ಯೋಜನೆ ತಯಾರಿಸಿ, ಅನುಮೋದನೆ ಪಡೆಯಲಾಯಿತು. ನಂತರ ವಿವಿಧ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಿ, ಒಪ್ಪಿಗೆ ಪಡೆಯಲಾಯಿತು.
ನಂತರ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಪುರಸಭೆಗೆ ಒಳಪಡುವ ಕಟ್ಟಡದ ಸ್ಥಳವನ್ನು ಬಿಎಸ್‌ವಿ ಶಾಲೆ ನಡೆಸಲು ಹಿಂದಿನವರು ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಹಲವು ವರ್ಷಗಳಿಂದ ಬಿಎಸ್‌ವಿ ಶಾಲೆಯಿಂದ ಪುರಸಭೆಗೆ ಯಾವುದೇ ಆದಾಯ ಬಂದಿಲ್ಲ. ಇಲ್ಲಿನ ಸ್ಥಳವನ್ನು ಬಿಡುವಂತೆ ಹಲವು ವರ್ಷಗಳಿಂದ ಶಾಲಾ ಆಡಳಿತ ಮಂಡಳಿಯವರಿಗೆ ತಿಳಿಸುತ್ತಾ ಬಂದರೂ, ಕುಂಟು ನೆಪ ಹೇಳಿಕೊಂಡು, ಪುರಸಭೆ ಜಾಗವನ್ನು ಬಿಟ್ಟಿಕೊಡದೇ, ಉದ್ದಟತನ ತೋರುತ್ತಿದ್ದಾರೆ. ಆದರೆ, ಈ ಸಲ ಯಾವುದೇ ಕಾರಣಕ್ಕೂ ಪುರಸಭೆ ಸ್ಥಳದಲ್ಲಿ ಶಾಲೆ ನಡೆಸಲು ಬಿಡುವುದಿಲ್ಲ. ಮತ್ತು ಐದು ದಿನದೊಳಗಾಗಿ ಆಡಳಿತ ಮಂಡಳಿಯವರು ತೆರವು ಮಾಡಬೇಕು. ಇಲ್ಲವಾದಲ್ಲಿ ಮೇ.1ರಂದು ಖುದ್ದಾಗಿ ಶಾಲೆಯನ್ನು ತೆರವುಗೊಳಿಸಲಾಗುವುದು. ಮುಂದಿನ ದಿನದಲ್ಲಿ ನಗರಸಭೆಯಾಗಲಿದ್ದು, ಜಾಗದ ಅವಶ್ಯಕತೆ ಇದ್ದು, ಮತ್ತು ಅಭಿವೃದ್ಧಿ ದೃಷ್ಠಿಯಿಂದ ಪುರಸಭೆಗೆ ಒಳಪಡುವ ಜಾಗವನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೆ.ದುರುಗಣ್ಣ, ಉಪಾಧ್ಯಕ್ಷೆ ಸುಶೀಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯರಾದ ಡಾ.ವಿ.ಎಲ್.ಬಾಬು, ಕೆ.ಎಸ್.ಚಾಂದಬಾಷಾ, ರಾಮಾಂಜನೇಯ, ಎಸ್.ಎಂ.ನಾಗರಾಜ, ಟಿ.ವಿ.ಸುದರ್ಶನರೆಡ್ಡಿ, ಲೊಡ್ಡು ಹೊನ್ನೂರವಲಿ, ರಮೇಶ ಹೂಗಾರ, ವೀರಾಂಜಿನಿ ಸೇರಿದಂತೆ ಸಿಬ್ಬಂದಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
