
ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ‘ಸಂವಿಧಾನ ಸಂರಕ್ಷಕರ ಸಮಾವೇಶ’ಕ್ಕೆ ಅದ್ದೂರಿ ಚಾಲನೆ ದೊರಕಿದ್ದು, ಸಾವಿರಾರು ಸಂವಿಧಾನ ಸಂರಕ್ಷಕರು ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಿಂದ ಅಂಬೇಡ್ಕರ್ ವೃತ್ತದ ವರೆಗೆ ಶಿಸ್ತುಬದ್ಧವಾಗಿ ಪರೇಡ್ ನಡೆಸಿದರು.
ಕೊಂಬು, ಕಹಳೆ, ತಮಟೆ, ನಗಾರಿ ಹಾಗೂ ವಿವಿಧ ನೆಲಮೂಲ ಕಲಾವಿದರು ಪ್ರದರ್ಶನ ನೀಡಿದರು. ‘ನಮ್ಮ ಸಂವಿಧಾನದ ರಕ್ಷಣೆ ನಮ್ಮಿಂದಲೇ’ ಸೇರಿದಂತೆ ಹಲವು ಘೋಷಣೆಗಳನ್ನು ಕೂಗುತ್ತಾ, ನಗರದಲ್ಲಿ ಸಂವಿಧಾನ ಸಂರಕ್ಷಣೆಯ ಘೋಷಣೆ ಕೂಗಿದರು. ರಾಜ್ಯದ 31 ಜಿಲ್ಲೆಗಳಿಂದ ಆಗಮಿಸಿರುವ ಸಾವಿರಾರು ಸಂವಿಧಾನ ಸಂರಕ್ಷಕರು, ಪರೇಡ್ ಮೂಲಕ ಬೀರಲಿಂಗೇಶ್ವರ ದೇವಸ್ಥಾನ ಆವರಣದ ಮುಖ್ಯ ವೇದಿಕೆಯತ್ತ ಹೆಜ್ಜೆ ಹಾಕಿದರು.
ಪರೇಡ್‌ನಲ್ಲಿ ಹಿರಿಯ ದಲಿತ ನಾಯಕ ಎನ್. ವೆಂಕಟೇಶ್, ಎದ್ದೇಳು ಕರ್ನಾಟಕ ಸೆಂಟ್ರಲ್ ವರ್ಕಿಗ್ ಕಮಿಟಿ ಸದಸ್ಯ ತಾರಾ ರಾವ್, ಜಮಾತ್-ಎ-ಇಸ್ಲಾಮಿ-ಹಿಂದ್ ರಾಜ್ಯ ಕಾರ್ಯದರ್ಶಿ ಮೊಹಮದ್ ಯೂಸಫ್ ಖನ್ನಿ, ಕಾನೂನು ವಿಶ್ವವಿದ್ಯಾಲಯದ ನಿರ್ದೆಶಕ ಸೇಂಟ್ ಜೋಸೆಫ್, ಫಾದರ್ ಝೆರಾಲ್ಡ್ ಡಿಸೋಜಾ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯದರ್ಶಿ ಕರಿಬಸಪ್ಪ, ಸತೀಶ್ ಅರವಿಂದ್, ಎಪಿಸಿಆರ್ ಜಿಲ್ಲಾ ಕಾರ್ಯದರ್ಶಿ ನಿಜಾಮುದ್ದೀನ್, ದಲಿತ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಅಂಬಣ್ಣ ಅರೋಲಿಕರ್, ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ನೂರಾರು ಚಿಂತಕರು, ಬರಹಗಾರರು, ಹೋರಾಟಗಾರರು ಹಾಗೂ ಪತ್ರಕರ್ತರು ಪರೇಡ್‌ನಲ್ಲಿ ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
