ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಶಿಷ್ಯರಾದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ವರ್ಧಂತಿ ಉತ್ಸವವು ಅರ್ಥಪೂರ್ಣವಾಗಿ ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಸಂಭ್ರಮದಿಂದ ನಡೆಯಿತು.
ಪರಮ ಪೂಜ್ಯರುಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀಮಠದಲ್ಲಿ ಆಯುಷ್ಯ ಚರುಶಾಂತಿ, ಗ್ರಹಶಾಂತಿ, ಮೃತ್ಯುಂಜಯ ಹವನ, ಧನ್ವಂತರಿ ಹವನಗಳನ್ನು ಋತ್ವಿಜರು ನಡೆಸಿಕೊಟ್ಟರು.
ಶಿಷ್ಯರಿಂದ ಶ್ರೀಗಳವರ ತುಲಾಭಾರ ಸೇವೆಯು ನಡೆಯಿತು.
ತದ ನಂತರ ಪೂಜ್ಯ ಶ್ರೀಮದಾನಂದಬೋಧೇಂದ್ರ ಸರಸ್ವತೀ ಸ್ವಾಮಿಗಳು ಗೋಶಾಲೆಗೆ ಚಿತ್ತೈಸಿ ಎಲ್ಲಾ ಗೋವುಗಳಿಗೆ ಗ್ರಾಸವನ್ನು ನೀಡಿದರು. ಪುಣ್ಯ ದಿವಸವಾದ ಇಂದು ಮಠಕ್ಕೆ ಆಗಮಿಸಿ, ಮಠದಲ್ಲಿ ನಡೆದ ಎಲ್ಲಾ ಕಾರ್ಯಕ್ರಮದಲ್ಲಿ ಶಿಷ್ಯ ಭಕ್ತರು ಭಾಗವಹಿಸಿ ಪ್ರಸಾದ ಮಂತ್ರಾಕ್ಷತೆಗಳನ್ನು ಪಡೆದು ಧನ್ಯರಾದರು. ವರ್ಧಂತಿಯ ಅಂಗವಾಗಿ
ಯಲ್ಲಾಪುರದ ಟಿ.ಎಸ್.ಎಸ್ ಸಭಾಂಗಣದಲ್ಲಿ ರಕ್ತದಾನ, ಉಚಿತ ಆರೋಗ್ಯ ಶಿಬಿರ, ಉಚಿತ ಔಷಧ ವಿತರಣೆ ಇತ್ಯಾದಿ ಕಾರ್ಯಕ್ರಮಗಳು ನಡೆದವು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
