ಶಿವಮೊಗ್ಗ : ಶಂಕರಾಚಾರ್ಯರು ಸದಾ ಪ್ರಾತ ಸ್ಮರಣೀಯರು. ದೇಶದ ಉದ್ದಗಲಕ್ಕೂ ಸಂಚರಿಸಿ ತತ್ವಗಳನ್ನು, ಸಂಸ್ಕೃತಿಯನ್ನು ಪಸರಿಸಿ ನಮ್ಮ ಪರಂಪರೆಯ ನೆಲೆಗಟ್ಟನ್ನು ಭದ್ರಪಡಿಸಿದ್ದಾರೆ ಎಂದು ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಶಂಕರಾಚಾರ್ಯರ ಮಹತ್ವದ ಕಾರ್ಯದಿಂದಾಗಿ ಧರ್ಮ ಉಳಿದಿದೆ. ದೇಶದ ಉದ್ದಗಲ ಸಂಚರಿಸಿ ಜೀವನಕ್ಕೆ ಅಗತ್ಯವಾದ ತತ್ವಗಳನ್ನು ಉಪದೇಶಿಸಿದ್ದಾರೆ. ಐದು ಕಡೆ ಪೀಠ ಸ್ಥಾಪನೆ ಮಾಡಿರುವ ಇವರು ಶ್ರೇಷ್ಠ ಪರಂಪರೆಯ ರೂವಾರಿ. ಸಾಂಸ್ಕೃತಿಕ ಪರಂಪರೆಯ ನೆಲೆಗಟ್ಟು ಭದ್ರ ಆಗಿರುವುವುದು ಇವರಿಂದ. ನಾವೆಲ್ಲ ಸೇರಿ ಅವರ ಮಹತ್ ಕಾರ್ಯಗಳನ್ನು ಮುಂದೆ ತೆಗೆದುಕೊಂಡು ಹೋಗಬೇಕು, ಅವರ ವಿಚಾರಗಳನ್ನು ಎಲ್ಲರಿಗೂ ತಿಳಿಸಬೇಕು, ಇಂತಹ ಮಹಾ ದಾರ್ಶನಿಕರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೇ ಎಲ್ಲರೂ ಸೇರಿ ಜಯಂತಿ ಆಚರಿಸೋಣ ಎಂದು ಕರೆ ನೀಡಿದರು.
ಶಿವಮೊಗ್ಗದ ಪ್ರವಚನಕಾರರಾದ ಜಿ. ಎಸ್. ನಟೇಶ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಶಂಕರಾಚಾರ್ಯರು ನಮ್ಮೆಲ್ಲರಿಗೆ ಜಾಗೃತಿಯ ಮಾತುಗಳನ್ನು ನೀಡಿದ್ದಾರೆ. ಅತ್ಯಂತ ಸರಳವಾಗಿ ಜೀವನದ ತತ್ವಗಳನ್ನು, ವಿಚಾರಗಳನ್ನು ತುಂಬಿ ಕಟ್ಟಿಕೊಟ್ಟಿದ್ದಾರೆ. ಕೇವಲ 32 ವರ್ಷಕ್ಕೆ ದೇಹತ್ಯಾಗ ಮಾಡಿದ ಅವರು ಅಷ್ಟು ಚಿಕ್ಕವಯಸ್ಸಿನಲ್ಲೇ ದೇಶಾದ್ಯಂತ ಸಂಚರಿಸಿ ತತ್ವ ಬೋಧನೆ ಮಾಡಿದ್ದು, ಮಾನವ ಕುಲಕ್ಕಾಗಿ ಜೀವನ ತ್ಯಾಗ ಮಾಡಿದ್ದಾರೆ.
ಮಾನವ ಬದುಕನ್ನು ಸುಂದರ, ಸಾರ್ಥಕಗೊಳಿಸಿಕೊಳ್ಳುವ ತತ್ವಗಳನ್ನು ಅವರು ನೀಡಿದ್ದಾರೆ. ಭಗವಂತನನ್ನು ಅರಿಯುವುದೇ ತತ್ವ ಎಂದಿರುವ ಅವರು ನಾಲ್ಕು ವೇದಗಳನ್ನು ಆಯ್ದ ಮಹಾವಾಕ್ಯ ನೀಡಿದ್ದಾರೆ. ಹಿಂದೆ ಜಾತಿ, ಮತ ಇರಲಿಲ್ಲ. ಅದನ್ನು ನಾವು ಮಾಡಿಕೊಂಡಿದ್ದು. ಬ್ರಹ್ಮ ನೀತಿಯೊಂದೇ ಇದ್ದದ್ದು. ದಾರ್ಶನಿಕರು ನಮ್ಮ ಜೀವನ ಸಾರ್ಥಕಗೊಳಿಸಲು, ಸುಗುಮಗೊಳಿಸುವುದಕ್ಕಾಗಿ ತತ್ವಗಳನ್ನು ನೀಡಿದ್ದಾರೆ.
ಜೀವಾತ್ಮ, ಪರಮಾತ್ಮ ಒಂದೇ ಎಂದು ಆಚಾರ್ಯರು ಸೇರಿದಂತೆ ಎಲ್ಲಾ ದಾರ್ಶನಿಕರು ತಿಳಿಸಿದ್ದಾರೆ. ಜೀವಕ್ಕೆ ಪ್ರಾಧಾನ್ಯತೆ ನೀಡಬೇಕು. ಕ್ಷಣಿಕವಾದದ್ದನ್ನು ಬಿಡಬೇಕು. ಜೀವ, ಪರಮಾತ್ಮ ಬೇರೆಯಲ್ಲ ಈ ಜಗತ್ತಿನಲ್ಲಿ ಪರಮತ್ವ ಮಾತ್ರ ಸತ್ಯ, ಶರೀರ ವ್ಯಾವಹಾರಿಕ ಸತ್ಯ ದೇಹ ಕಾಣುತ್ತದೆ ಅದು ಶಾಶ್ವತ ಅಲ್ಲ. ಜೀವ ಕಾಣುವುದಿಲ್ಲ, ಅದು ಶಾಶ್ವತ. ಕಾಣುವುದು ಉಳಿಯುವುದಿಲ್ಲ. ಕಾಣದ್ದೇ ಶಾಶ್ವತ ಎಂದು ಆರ್ಯರು ತಿಳಿಸಿದ್ದು, ಅವರ ತತ್ವಗಳನ್ನು ನಾವು ಅರಿತು ಅಳವಡಿಸಿಕೊಳ್ಳಬೇಕಿದೆ ಎಂದರು.
ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್. ರವಿಕುಮಾರ್ ಮಾತನಾಡಿ, ಶಂಕರಾಚಾರ್ಯರು ಎಲ್ಲಾ ಸಮಾಜಕ್ಕೆ ಸೇರಿದ ದಾರ್ಶನಿಕರು. ಎಲ್ಲರೂ ಸೇರಿ ಜಯಂತಿ ಆಚರಣೆ ಮಾಡೋಣ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್ ಮಾತನಾಡಿ, ಶಂಕರಾಚಾರ್ಯರು ರಾಷ್ಟ್ರದಾದ್ಯಂತ ಪ್ರವಾಸ ಮಾಡಿ ನಾಲ್ಕು ದಿಕ್ಕಿನಲ್ಲಿ ಪೀಠ ಸ್ಥಾಪನೆ ಮಾಡಿದ್ದಾರೆ. 18 ನೇ ಶತಮಾನದಲ್ಲಿ ಅವರು ಪ್ರತಿಪಾದಿಸಿದ ತತ್ವಗಳು ಇಂದಿಗೂ ಪ್ರಸ್ತುತ ಎಂದ ಅವರು ನಾವೆಲ್ಲ ನಂಬಿರುವ ಬ್ರಾಹ್ಮಣ ಸಮಾಜ ಎಲ್ಲರೊಂದಿಗೆ ಒಗ್ಗೂಡಿ ಮುನ್ನುಗ್ಗಬೇಕಾಗಿದೆ ಎಂದರು.
ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಮಾತನಾಡಿದರು. ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್, ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಡಾ.ಪಿ.ನಾರಾಯಣ್, ಭಜನಾ ಪರಿಷತ್ ಅಧ್ಯಕ್ಷ ಸಂದೇಶ್ ಉಪಾಧ್ಯ, ಸಮಾಜದ ಮುಖಂಡರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಮಾಜದ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಬೆಂಗಳೂರು
