ಬಳ್ಳಾರಿ / ಕಂಪ್ಲಿ : ನಿತ್ಯ ಮಗಳನ್ನು ಬೆಳಿಗ್ಗೆ 6 ಕ್ಕೆ ಬೈಕ್ ಮೂಲಕ 6 ಕಿಲೋಮೀಟರ್ ದೂರದ ಕಂಪ್ಲಿಗೆ ತೆರಳಿ ಶಾಲೆಗೆ ಬಿಟ್ಟು, ಹೊಲಗದ್ದೆ ಕೆಲಸ ಮುಗಿಸಿ ಮತ್ತೆ ರಾತ್ರಿ 9ಕ್ಕೆ ಶಾಲೆಯಿಂದ ಮನೆಗೆ ಕರೆ ತರುವುದು ಇದು ದಿನನಿತ್ಯದ ವೇಳಾಪಟ್ಟಿಯಾಗಿತ್ತು.
ತಾಲೂಕಿನ ಸಣಾಪುರ ಗ್ರಾಮದ ರೈತ ಹೆಚ್ ಉಮೇಶ ಗೌಡ ತಮ್ಮ ಪುತ್ರಿ ಹೆಚ್. ನಂದಿತ ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದನ್ನು ಸಂತಸದಿಂದ ಹಂಚಿಕೊಳ್ಳುತ್ತಿದ್ದಂತೆ ಕ್ಷಣಕಾಲ ಸಂತೋಷದಿಂದ ಕಣ್ಣುಗಳು ಒದ್ದೆಯಾದವು.
ಇಡೀ ವರ್ಷ ಮಗಳಿಗಾಗಿ ಕಷ್ಟಪಟ್ಟಿದ್ದು ಆ ನೋವನ್ನೆಲ್ಲ ತನ್ನ ಮಗಳ ಈ ಸಾಧನೆ ಮರೆಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ತಾಯಿ ಗೃಹಿಣಿ ಎಚ್ ಸವಿತಾ ಮಾತನಾಡಿ ಬೆಳಿಗ್ಗೆ 5ಕ್ಕೆ ಎದ್ದು ಟಿಫಿನ್, ಊಟ , ಸಂಜೆಗೆ ಸ್ನಾಕ್ಸ್ ಅನ್ನು ಮೂರು ಬಾಕ್ಸ್ ಗಳಲ್ಲಿ ಕಟ್ಟಿ ಕೊಡುವುದು ದಿನನಿತ್ಯದ ಕಾಯಕವಾಗಿತ್ತು. ಮಗಳು ಸಹ ಶ್ರಮಪಟ್ಟು ಓದಿದ್ದಾಳೆ ಅವಳ ಸಾಧನೆ ನನಗೆ ತೃಪ್ತಿ ತಂದಿದೆ ಎಂದು ಹೇಳಿದರು.
ಬೆಳಿಗ್ಗೆ 7ಕ್ಕೆ ಶಾಲೆಗೆ ಹಾಜರಾಗಿ ರಾತ್ರಿ 9ಕ್ಕೆ ಮನೆಗೆ ಮರಳುತ್ತಿದ್ದ ಶಾಲೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದರಿಂದ ಅಂದಿನ ಪಾಠಗಳನ್ನ ಮನನ ಮಾಡಿಕೊಂಡು ನೋಟ್ಸ್ ಮಾಡುತ್ತಿದ್ದೆ ಮೊಬೈಲ್ ಮುಟ್ಟುತ್ತಿರಲಿಲ್ಲ ನನ್ನ ಉತ್ತಮ ಗೆಳೆಯ ನನ್ನ ಪುಸ್ತಕಗಳಾಗಿದ್ದವು ಹಾಗಾಗಿ ಸಾಧನೆಯನ್ನು ಮಾಡಲು ನನ್ನ ಶಾಲೆಯ ಪ್ರಾಂಶುಪಾಲರು ಶಿಕ್ಷಕರು ನನ್ನ ತಂದೆ ತಾಯಿ ಕಾರಣ ಎಂದು H. ನಂದಿತ ಹರ್ಷ ವ್ಯಕ್ತಪಡಿಸಿದಳು.
ಮುಂದಿನ ವಿದ್ಯಾಭ್ಯಾಸದಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಭವಿಷ್ಯದಲ್ಲಿ ದಂತ ವೈದ್ಯ ಆಗಬೇಕು ಎನ್ನುವ ಗುರಿ ಇದೆ ಎಂದು ನಂದಿತಾ ಮನದಾಳದ ಮಾತನ್ನು ತಿಳಿಸಿದರು.
ಹೆಚ್. ನಂದಿತಾ ನಗರದ ವಿದ್ಯಾಸಾಗರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾಳೆ.
ವರದಿ : ಜಿಲಾನಸಾಬ್ ಬಡಿಗೇರ್
