ಬಳ್ಳಾರಿ/ ಕಂಪ್ಲಿ : ಸ್ಥಳೀಯ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶ್ರೀ ಭಗೀರಥ ಜಯಂತ್ಯೋತ್ಸವ ಹಿನ್ನಲೆ ಭಾವಚಿತ್ರಕ್ಕೆ ವಿಶೇಷ ಪೂಜೆ, ಪುಷ್ಪ ನಮನದೊಂದಿಗೆ ಭಾನುವಾರ ಜಯಂತಿ ಆಚರಿಸಲಾಯಿತು.
ನಂತರ ತಹಶೀಲ್ದಾರ್ ಶಿವರಾಜ ಶಿವಪುರ ಮಾತನಾಡಿ, ಭಗೀರಥ ಇವರು ನಾಡಿಗೆ ಕೊಡುಗೆ ನೀಡಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಆಲಿಸಬೇಕು ಎಂದರು.
ಭಗೀರಥ ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಯು.ರುದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಸುಮಾರು 30-40 ಲಕ್ಷ ಜನಸಂಖ್ಯೆ ಇದ್ದು, ಆದರೆ, ಸರ್ಕಾರ ಉಪ್ಪಾರ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಕೂಡಲೇ ಹಿಂದಿನ ಜಾತಿಗಣತಿ ಪರಿಶೀಲಿಸಬೇಕು. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ಮಾತನಾಡಿ, ಸಮುದಾಯವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ್ದು, ಸರ್ಕಾರದ ವಿಶೇಷ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ತಾಲೂಕು ಮಟ್ಟದಲ್ಲಿ ಸಮುದಾಯ ಭವನ ನಿರ್ಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಯು.ನಾಗರಾಜ, ದೊಡ್ಡಬಸಪ್ಪ, ವೆಂಕಟೇಶ, ಮುನಿಯಪ್ಪ, ಪೂಜಾರಿ ಈರಣ್ಣ, ನಾಗಾರ್ಜುನ, ಮಂಜುನಾಥ, ಕುಬೇರ, ಗೋವಿಂದಪ್ಪ, ವೆಂಕಟೇಶ, ಗುರುಮೂರ್ತಿ, ಜ್ಞಾನಪ್ಪ, ಮಂಜುನಾಥ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
