
UG D ನಿರ್ವಹಣೆ ವೈಫಲ್ಯ- ಪುರಸಭೆ ಕಾರ್ಯಾಲಯದಿಂದ ಪ್ರತಿ ಬಾರಿ ಅದೇ ರಾಗ ಅದೇ ತಾಳ.
ಯಾದಗಿರಿ/ಗುರುಮಠಕಲ್: ಪಟ್ಟಣದ ಒಳ ಚರಂಡಿ ವ್ಯವಸ್ಥೆ ಸುಮಾರು 30 ಕೋಟಿ ವೆಚ್ಚದಲ್ಲಿ 2019 ರಲ್ಲಿ ಪೂರ್ಣಗೊಂಡು, 2020-21 ನೆಯ ಸಾಲಿನಲ್ಲಿ ಗುರುಮಠಕಲ ಪುರಸಭೆ ಕಾರ್ಯಾಲಯಕ್ಕೆ ಹಸ್ತಾಂತರಗೊಂಡಿದೆ, ಸುಮಾರು 4 ವರ್ಷ ಕಳೆದರೂ ಸರಿಯಾದ ನಿರ್ವಹಣೆ ಸಾಧ್ಯವಾಗದೆ ರಸ್ತೆ ತುಂಬೆಲ್ಲಾ ತ್ಯಾಜ್ಯ ನೀರು ಹರಿದು, ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳ ಮೇಲೆ ಪಕ್ಕದಿಂದ ವಾಹನ ಹಾದು ಹೋದಾಗ ಮೈಮೇಲೆಯೇ ಸಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ತಿಂಗಳಿನಿಂದ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ಹಗಲಿರುಳು ಜರುಗುತ್ತಿದ್ದು, ಕೆಲ ವಾರ್ಡಗಳಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಯಾವುದೇ ಮುಂಜಾಗ್ರತೆ ವಹಿಸದೆ ನಿರ್ಮಾಣ ಮಾಡಿರುವುದು UGD ಅವಾಂತರಕ್ಕೆ ಕಾರಣವಾಗಿದೆ.
ಪಟ್ಟಣದ ಹಲವು ಕಡೆ ಮುಚ್ಚಳ ಸೋರಿಕೆಯಾಗಿ ತ್ಯಾಜ್ಯ ಸೋರಿಕೆಯಾಗುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಕಣ್ಣಿದ್ದು ಕುರುಡಾಗಿದ್ದು ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರಿಗಳ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು ಮುಂದಿನ ದಿನಗಳಲ್ಲಿ ಪುರಸಭೆ ಮುತ್ತಿಗೆ ಹಾಕಬೇಕು ಎಂದು ಅಲ್ಲಲ್ಲಿ ಸ್ಥಳೀಯರು ಗುಸುಗುಸು ನಡೆಸಿದ್ದಾರೆ.
ಕಾರ್ಮಿಕರ ಕೊರತೆ ಇದೆ, STP(SEWAGE TREATMENT PLAN) ಬಗ್ಗೆ ಆದಷ್ಟು ಬೇಗ ಜಾರಿ ಯಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಮುಖ್ಯಧಿಕಾರಿಗಳಾದ ಭಾರತಿ ದಂಡೋತಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ರಾಜಕುಮಾರ್ ಹಬೀಬ್ ಸಹಾಯಕ ಅಭಿಯಂತರರು, ಪುರಸಭೆಯವರಿಗೆ ಪ್ರತಿ ಬಾರಿ ಸಮಸ್ಯೆ ಬಂದಾಗ ಮಾತ್ರ ಕಾರ್ಮಿಕರ ಕೊರತೆ ನೆನಪಿಗೆ ಬರುತ್ತೆ, STP ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೇ ಕಳೆದ ವರ್ಷ ಸುಮಾರು 65 ಲಕ್ಷರೂಪಾಯಿಗಳ ಅಂದಾಜು ಪ್ರತಿ ನೀಡಿದ್ದೇವೆ, ಆದರೆ ಇನ್ನೂ ಯಾಕೆ ಪ್ರಕ್ರಿಯೆ ತಡ ಮಾಡುತ್ತಿರುವದು ನನಗೆ ತಿಳಿದಿಲ್ಲ ಎನ್ನುತ್ತಾರೆ, ಸೇಡಂ ಪಟ್ಟಣದಲ್ಲಿ UGD ಯ STP ಸಂಸ್ಕರಣಾ ನೀರು ಬಳಕೆಗೆ ನೀಡುವಂತೆ ಅಲ್ಲಿನ ಕಾರ್ಖಾನೆಗಳು ಬೇಡಿಕೆ ಇಟ್ಟಿವೇ ಆದರೆ ಇಲ್ಲಿ ಮಾತ್ರ ಯಾವುದೇ ಮುಂದಾಲೋಚನೆ ಮಾಡದೆ ಇರುವದು ವಿಪರ್ಯಾಸ ಎಂದು ಹೇಳಿದರು.
ಆದಾಯವಿಲ್ಲದ UGD ನಿರ್ವಹಣೆ ಯಾರಿಗೂ ಬೇಡವಾದ ಕೂಸಾಗಿದೆ, ಪುರಸಭೆಗೆ ಮೊದಲು ಕೆಲಸಕ್ಕೆ ಅನುಗುಣವಾಗಿ ಕಾರ್ಮಿಕರನ್ನು ನೇಮಿಸಿಕೊಂಡು, STP ತ್ಯಾಜ್ಯ ನೀರು ಸಂಸ್ಕರಣೆ ಘಟಕ ನಿರ್ಮಿಸಿ ಅಪೂರ್ಣ ಇರುವ ಪೈಪ್ ಲೈನ್ ತ್ವರಿತಗತಿಯಲ್ಲಿ ಪೂರ್ಣಗೊಳಿಸಿದಲ್ಲಿ ಮಾತ್ರ ಸಮಸ್ಯೆ ಬಗೆಹರಿಯುತ್ತದೆ ಎಂದು ಸ್ಥಳೀಯ ವೀರೇಶ್ ಆವಂಟಿ ಪತ್ರಿಕೆಗೆ ಅಭಿಪ್ರಾಯ ತಿಳಿಸಿದರು.
ಸಂಬಂಧ ಪಟ್ಟ ಅಧಿಕಾರಿಗಳು ಅಸಡ್ಡೆಯನ್ನು ತೋರದೆ ಮೊದಲು ಪ್ರಸಕ್ತ ಸಮಸ್ಯೆ ಬಗೆಹರಿಸಿ, ದುರ್ನಾತ ತಪ್ಪಿಸಿ ಸಾರ್ವಜನಿಕರ ಆರೋಗ್ಯ ಕಾಪಾಡುವಂತಾಗಲಿ. ಪುರಸಭೆ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಪ್ರತಿನಿತ್ಯ ಗೋಳು ಹೇಳುವುದು ಸಾಮಾನ್ಯವಾಗಿದೆ ಆದರೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ಜರುಗುತ್ತಿಲ್ಲ.
ವರದಿ: ಜಗದೀಶ್ ಕುಮಾರ್ ಭೂಮಾ
