ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಾರತ ಪಾಕಿಸ್ತಾನ ಮತ್ತು ಜೀವನದಿ ಸಿಂಧೂನದಿ

ಪಾಕ್ ಶಾಕ್ ಆಗೋದಂತೂ ಸತ್ಯ

ಇಂಡಸ್ ವ್ಯಾಲಿ ಟ್ರೀಟಿ, ಅಧಿಕೃತವಾಗಿ ಇಂಡಸ್ ವಾಟರ್ ಟ್ರೀಟಿ (IWT) ಎಂದು ಕರೆಯಲ್ಪಡುವ ಈ ಒಪ್ಪಂದವು 1960ರ ಸೆಪ್ಟೆಂಬರ್ 19ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ ವ್ಯವಸ್ಥೆಯ ನೀರಿನ ಹಂಚಿಕೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಒಪ್ಪಂದವಾಗಿದೆ. ಇದನ್ನು ವಿಶ್ವ ಬ್ಯಾಂಕ್‌ನ ಮಧ್ಯಸ್ಥಿಕೆಯಲ್ಲಿ ಕರಾಚಿಯಲ್ಲಿ ಸಹಿ ಮಾಡಲಾಯಿತು. ಈ ಒಪ್ಪಂದವು ಎರಡೂ ದೇಶಗಳ ನಡುವಿನ ನೀರಿನ ಸಂಘರ್ಷವನ್ನು ತಡೆಗಟ್ಟಲು ಮತ್ತು ಸಿಂಧೂ ನದಿ ಜಲಾನಯನ ಪ್ರದೇಶದ ನೀರನ್ನು ಸಮರ್ಪಕವಾಗಿ ಹಂಚಿಕೊಳ್ಳಲು ಮಾಡಿಕೊಂಡ ಒಪ್ಪಂದವಾಗಿದೆ.

ಒಪ್ಪಂದದ ಮುಖ್ಯ ಅಂಶಗಳು

ಒಪ್ಪಂದವು ಭಾರತದ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಮಧ್ಯೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ 1960 ಸೆಪ್ಟೆಂಬರ್ 19ರಂದು ನಡೆಯಿತು. ಪಾಕಿಸ್ತಾನದಲ್ಲಿ 1960ರ ಕಾಲಕ್ಕೆ ಪ್ರಧಾನಮಂತ್ರಿ ಸ್ಥಾನ ಇರಲಿಲ್ಲ ಕಾರಣ ಮಿಲಿಟರಿ ಆಡಳಿತವೇರ್ಪಟ್ಟು ಪ್ರಧಾನಿ ಸ್ಥಾನ ರದ್ದಾಗಿತ್ತು. ಹಾಗಾಗಿ ಅಧ್ಯಕ್ಷ ಅಯೂಬ್ ಖಾನ್ ಒಪ್ಪಂದಕ್ಕೆ ಸಹಿಹಾಕಿದ್ದರು.

ಸಿಂಧೂ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ಇನ್ನು ಐದು ನದಿಗಳು ಹರಿಯುತ್ತಿದ್ದು ಅವೆಲ್ಲವನ್ನೂ ಎರಡು ಶಾಖೆಗಳಾಗಿ ಮಾಡಲಾಯಿತು. ಆ ಶಾಖೆಗಳೇ ಪೂರ್ವ ನದಿಗಳು ಮತ್ತು ಪಶ್ಚಿಮ ನದಿಗಳು. ಪೂರ್ವದ ನದಿಗಳ ಸಾಲಿನಲ್ಲಿ ಸಟ್ಲೆಜ್, ಬಿಯಾಸ್, ಮತ್ತು ರಾವಿ ನದಿಗಳಿದ್ದು ಅವುಗಳ ಸಂಪೂರ್ಣ ಬಳಕೆಯ ಹಕ್ಕನ್ನು ಭಾರತಕ್ಕೆ ನೀಡಲಾಗಿದೆ. ಪಶ್ಚಿಮದ ನದಿಗಳಲ್ಲಿ ಸಿಂಧೂ, ಜೀಲಂ, ಮತ್ತು ಚಿನಾಬ್ ನದಿಗಳ ಸಂಪೂರ್ಣ ಬಳಕೆಯ ಹಕ್ಕನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ. ಆದರೆ, ಭಾರತವು ಪಶ್ಚಿಮದ ನದಿಗಳಿಂದ ಸೀಮಿತ ಪ್ರಮಾಣದ ನೀರನ್ನು ಕೃಷಿ, ಗೃಹ ಬಳಕೆ, ಮತ್ತು ಜಲವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಬಹುದು, ಆದರೆ ನೀರಿನ ಹರಿವಿನ ಮೇಲೆ ಪರಿಣಾಮ ಬೀರದ ರೀತಿಯಲ್ಲಿರಬೇಕು.
ಎರಡು ದೇಶಗಳು ಸಿಂಧೂನದಿಗೆ ಸಂಬಂಧಿಸಿದಂತೆ ಏನಾದರೂ ಯೋಜನೆ ಮಾಡಬೇಕಾದರೆ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳಬೇಕು, ಜಲವಿದ್ಯುತ್ ಯೋಜನೆ, ನದಿಯ ಹರಿವು, ಜಲಾಶಯಗಳ ಸ್ಥಿತಿಯಂತಹ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬೇಕು ಇವೆಲ್ಲಾ ಒಪ್ಪಂದದ ಕಾರಾರುಗಳು.

ಪರ್ಮನೆಂಟ್ ಇಂಡಸ್ ಕಮಿಷನ್

ಒಪ್ಪಂದದ ಜಾರಿಯನ್ನು ಮೇಲ್ವಿಚಾರಣೆ ಮಾಡಲು ಪರ್ಮನೆಂಟ್ ಇಂಡಸ್ ಕಮಿಷನ್ ಸ್ಥಾಪಿಸಲಾಗಿದೆ. ಈ ಆಯೋಗದಲ್ಲಿ ಭಾರತ ಮತ್ತು ಪಾಕಿಸ್ತಾನದಿಂದ ತಲಾ ಒಬ್ಬ ಕಮಿಷನರ್ ಇರುತ್ತಾರೆ. ಆಯೋಗವು ನಿಯಮಿತ ಸಭೆಗಳನ್ನು ನಡೆಸುತ್ತದೆ, ಡೇಟಾ ವಿನಿಮಯವನ್ನು ಖಾತ್ರಿಪಡಿಸುತ್ತದೆ, ಮತ್ತು ಸಣ್ಣ ವಿವಾದಗಳನ್ನು ಪರಿಹರಿಸುತ್ತದೆ. ಒಂದುವೇಳೆ ವಿವಾದಗಳು ಸಂಭವಿಸಿದರೆ ಒಪ್ಪಂದದಲ್ಲಿ ತಾಂತ್ರಿಕ ಅಥವಾ ಇತರ ವಿವಾದಗಳನ್ನು ಪರಿಹರಿಸಲು
ಮೂರು- ಹಂತದ ಮಾರ್ಗಗಳಿವೆ.
1. ಆಯೋಗದ ಮಟ್ಟದಲ್ಲಿ ಚರ್ಚೆ.
2. ತಟಸ್ಥ ತಜ್ಞರಿಂದ ಪರಿಶೀಲನೆ.
3. ಅಂತಾರಾಷ್ಟ್ರೀಯ ಮಧ್ಯಸ್ಥಿಕೆ

ಭಾರತ ಪಾಕಿಸ್ತಾನ ನಡುವಿನ ಯುದ್ಧಗಳು – ಸಿಂಧು ನದಿ ಒಪ್ಪಂದವು ಭಾರತ-ಪಾಕಿಸ್ತಾನದ ನಡುವಿನ ಅತ್ಯಂತ ಯಶಸ್ವಿ ಒಪ್ಪಂದಗಳಲ್ಲಿ ಒಂದಾಗಿದೆ, ಏಕೆಂದರೆ ಇದು 1965, 1971, ಮತ್ತು 1999ರ ಕಾರ್ಗಿಲ್ ಯುದ್ಧಗಳ ಸಂದರ್ಭದಲ್ಲೂ ಒಪ್ಪಂದದ ಮೇಲೆ ಯಾವ ಪರಿಣಾಮವಾಗದೆ ಯತಾಸ್ಥಿತಿ ಕಾಪಾಡಿಕೊಳ್ಳಲಾಗಿತ್ತು.
ಇದು ಸಿಂಧೂ ನದಿ ವ್ಯವಸ್ಥೆಯಿಂದ ಎರಡೂ ದೇಶಗಳಿಗೆ ನೀರಿನ ಭದ್ರತೆಯನ್ನು ಒದಗಿಸುತ್ತದೆ, ಇದು ಇಡೀ ಪಾಕಿಸ್ತಾನದ ಕೃಷಿ ಮತ್ತು ಆರ್ಥಿಕತೆಗೆ ಮುಖ್ಯವಾಗಿದೆ. ಈ ಒಪ್ಪಂದವು ಶಾಶ್ವತವಾಗಿ ಜಾರಿಯಲ್ಲಿರುತ್ತದೆ, ಎರಡೂ ದೇಶಗಳ ಒಪ್ಪಿಗೆಯಿಂದ ಅದನ್ನು ಮಾರ್ಪಡಿಸಬಹುದು. ಒಂದು ರಾಷ್ಟ್ರವು ಒಪ್ಪಂದದಿಂದ ಹೊರಬರಲು ಬಯಸಿದರೆ, ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಗಂಭೀರ ಕಾರಣಗಳು ಮತ್ತು ಮಧ್ಯಸ್ಥಿಕೆಯ ಅಗತ್ಯವಿರುತ್ತದೆ. ಭಾರತದ ಮುಂದೆ ಪಾಕಿಸ್ತಾನ ಕಾಲೂರಿದ್ದೆ ಹೆಚ್ಚು. ಇವತ್ತಿಗೂ ನಮ್ಮ ಮುಂದೆ ಪಾಪಿಸ್ಥಾನ ಏನು ಅಲ್ಲ. ಒಳ್ಳೆ ಕಾಂಪಿಟೇಟರ್ ಕೂಡ ಅಲ್ಲ. ಬಲಿಷ್ಠ ಭಾರತವೆಲ್ಲಿ ನಿಕೃಷ್ಟ ಪಾಕ್ ಎಲ್ಲಿ. ಕೆದರಿ ಕೆದರಿ ಜಗಳಕ್ಕೆ ಬರುವ ಪಾಕಿಗೆ ಸದ್ಯದಲ್ಲೇ ಭಾರತ ತಕ್ಕ ಉತ್ತರ ಕೊಟ್ಟೆ ತೀರುತ್ತದೆ. ಕಾಯೋಣ!

ಪಾಕಿಸ್ತಾನ ಮತ್ತು ಸಿಂಧೂ ನದಿ ವ್ಯವಸ್ಥೆ –
ಪಾಕಿಸ್ತಾನದ ಕೃಷಿಯು ಶೇ.90%ಕ್ಕಿಂತ ಹೆಚ್ಚು ಸಿಂಧೂ ನದಿ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ, ವಿಶೇಷವಾಗಿ ಪಾಕಿಸ್ತಾನದ ಪಂಜಾಬಿನಲ್ಲಿ, ಇದು ದೇಶದ ಆಹಾರ ಭದ್ರತೆಗೆ ಕೇಂದ್ರವಾಗಿದೆ. ಸಿಂಧೂ ನದಿ ವ್ಯವಸ್ಥೆಯಿಂದ ಕಾಲುವೆ ವ್ಯವಸ್ಥೆ ಮೂಲಕ ಪಾಕಿಸ್ತಾನವು 33 ಮಿಲಿಯನ್ ಎಕರೆ ಭೂಮಿಯನ್ನು ನೀರಾವರಿಗೆ ಬಳಸುತ್ತದೆ. ಜಲವಿದ್ಯುತ್ ಉತ್ಪಾದನೆಗೂ ಸಿಂಧೂ ನದಿಯೇ ಆಧಾರ. ಉದಾಹರಣೆಗೆ, ತಾರ್ಬೆಲಾ ಮತ್ತು ಮಂಗ್ಲಾ ಜಲಾಶಯಗಳು ಪಾಕಿಸ್ತಾನದ ವಿದ್ಯುತ್ ಉತ್ಪಾದನೆಯ ಗಣನೀಯ ಭಾಗವನ್ನು ಒದಗಿಸುತ್ತವೆ. ಪಶ್ಚಿಮದ ನದಿಗಳಿಂದ ಸರಾಸರಿಯಾಗಿ 167-172 ಶತಕೋಟಿ ಘನ ಮೀಟರ್ (BCM) ನೀರು ವಾರ್ಷಿಕವಾಗಿ ಪಾಕಿಸ್ತಾನಕ್ಕೆ ಹರಿಯುತ್ತದೆ. ಒಟ್ಟು ಸಿಂಧೂ ವ್ಯವಸ್ಥೆಯಿಂದ ಪಾಕಿಸ್ತಾನವು 80% ಕ್ಕಿಂತ ಹೆಚ್ಚು ನೀರನ್ನು ಪಡೆಯುತ್ತದೆ. ಕೃಷಿ ಬಳಕೆಗೆ ಸುಮಾರು 123-135 BCM ನೀರು ಪಾಕಿಸ್ತಾನದ ನೀರಾವರಿ ವ್ಯವಸ್ಥೆಗೆ ಬಳಸಲಾಗುತ್ತದೆ. ಒಟ್ಟಾರೆಯಾಗಿ ಸಿಂಧೂ ನದಿ ವ್ಯವಸ್ಥೆಯು ಪಾಕಿಸ್ತಾನದ ಆರ್ಥಿಕತೆ, ಕೃಷಿ, ಮತ್ತು ಜನರ ಜೀವನಕ್ಕೆ ಅತ್ಯಂತ ಪ್ರಮುಖವಾದ ನೀರಿನ ಮೂಲವಾಗಿದೆ, ಮತ್ತು ಇಂಡಸ್ ವಾಟರ್ ಟ್ರೀಟಿಯು ಈ ನೀರಿನ ಗಣನೀಯ ಭಾಗವನ್ನು ಪಾಕಿಸ್ತಾನಕ್ಕೆ ಖಾತರಿಪಡಿಸುತ್ತದೆ.

ಭಾರತದ ಪಾಲು – IWT (Indus water treaty )

ಪ್ರಕಾರ ಭಾರತವು ಪೂರ್ವದ ನದಿಗಳಿಂದ (ರಾವಿ, ಬಿಯಾಸ್, ಸಟ್ಲೆಜ್) ಸುಮಾರು 40 ಶತಕೋಟಿ ಘನ ಮೀಟರ್ (BCM) ನೀರನ್ನು ಪಡೆಯುತ್ತದೆ, ಇದು ಒಟ್ಟು ಸಿಂಧೂ ವ್ಯವಸ್ಥೆಯ 20 – 25% ಆಗಿದೆ. ಸಿಂಧೂ ವ್ಯವಸ್ಥೆಯಿಂದ ಭಾರತದ ಒಟ್ಟು ಜಲವಿದ್ಯುತ್ ಉತ್ಪಾದನೆಯು ದೇಶದ ಒಟ್ಟು ವಿದ್ಯುತ್ ಉತ್ಪಾದನೆಯ ಶೇ.10-12% ಒದಗಿಸುತ್ತದೆ, ಆದರೆ ಭಾರತವು ಇತರ ಮೂಲಗಳಿಂದ (ಉಷ್ಣವಿದ್ಯುತ್, ಸೌರ, ಗಾಳಿ) ವಿದ್ಯುತ್‌ಗೆ ಹೆಚ್ಚು ಅವಲಂಬಿತವಾಗಿದೆ. ರಾಷ್ಟ್ರೀಯ ಅವಲಂಬನೆ: ಭಾರತದ ಒಟ್ಟಾರೆ ನೀರಿನ ಬೇಡಿಕೆಯಲ್ಲಿ ಸಿಂಧೂ ವ್ಯವಸ್ಥೆಯ ಕೊಡುಗೆ ಶೇ.10-15% ಆಗಿದೆ, ಏಕೆಂದರೆ ಭಾರತವು ಗಂಗಾ, ಬ್ರಹ್ಮಪುತ್ರ, ನರ್ಮದಾ, ಕಾವೇರಿ, ಮತ್ತು ಇತರ ನದಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಸಿಂಧೂ ನದಿ ವ್ಯವಸ್ಥೆಯು ಭಾರತದ ಪಂಜಾಬ್, ಹರಿಯಾಣ, ರಾಜಸ್ಥಾನ, ಮತ್ತು ಜಮ್ಮು-ಕಾಶ್ಮೀರದ ಆರ್ಥಿಕತೆಗೆ ಪ್ರಮುಖವಾದರೂ, ಭಾರತದ ಒಟ್ಟಾರೆ ನೀರಿನ ಅವಲಂಬನೆಯು ಇತರ ನದಿಗಳಿಂದ (ಗಂಗಾ, ಬ್ರಹ್ಮಪುತ್ರ, ಇತ್ಯಾದಿ) ಹಂಚಿಕೆಯಾಗಿದೆ. ಮೇಲಿನ ಎರಡು ದೇಶಗಳ ಕಡೆಯ ದತ್ತಾಂಶಗಳನ್ನು ನೋಡಿದಾಗ ಭಾರತ ಸಿಂಧೂ ನದಿ ಮೇಲಿನ ಅವಲಂಬನೆ ಪಾಕಿಸ್ತಾನಕ್ಕಿಂತ ಅತ್ಯಂತ ಕಮ್ಮಿ. ಪಾಕ್ ಪ್ರಧಾನವಾಗಿ ಸಿಂಧೂವನ್ನೇ ಆಧಾರವಾಗಿಸಿಕೊಂಡಿದೆ.

ಭಾರತ ಒಪ್ಪಂದವನ್ನು ಮುರಿಯಲು ಸಾಧ್ಯವೇ?

ಇಲ್ಲಿ ಭಾರತ ಸೂಕ್ತ ಕಾರಣ ಮತ್ತು ಸಾಕ್ಷಿಗಳನ್ನು ಮುಂದಿಟ್ಟು ಒಪ್ಪಂದವನ್ನು ಮೀರಬಹುದಾದರೂ ವಾಸ್ತವವಾಗಿ ಅದು ಅಸಾಧ್ಯವೇ ಆಗಿದೆ. ಕಾರಣ ಸಿಂಧೂ ನದಿಯ ನೀರನ್ನು ನಿಲ್ಲಿಸುವಂತಹ ಅಥವಾ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಭಾರತವೇ ಒಂದು ಕಡೆ ಸಂಗ್ರಹಿಸುವಷ್ಟು ಸಾಮರ್ಥ್ಯವಿರುವ ಆಣೆಕಟ್ಟು ಜಲಾಶಯಗಳಿಲ್ಲ. ಹೇಗಾದರೂ ಮಾಡಿ ನೀರು ತಡೆಯೋದೆ ಅಂತ ಆಣೆಕಟ್ಟು ಕಟ್ಟಿ ನೀರನ್ನು ಹಿಡಿದಿಡುತ್ತೇವೆಂದು ತೊಡೆ ತಟ್ಟಿ ನಿಂತರೆ ಕನಿಷ್ಠ 15 ರಿಂದ 20 ವರ್ಷವಾದರೂ ಆಣೆಕಟ್ಟು ಕಟ್ಟಲು ಬೇಕಾಗುತ್ತದೆ. ಭಾರಿ ವೆಚ್ಚದಿಂದ ಕೂಡಿದ ಕಾರ್ಯವು ಹೌದು. ಅಷ್ಟೆಲ್ಲ ಸಮಯ ಮತ್ತು ಹಣ ಖರ್ಚು ಮಾಡುವಷ್ಟು ಅಗತ್ಯತೆ ಭಾರತಕ್ಕಿದೆಯೇ? ಅಥವಾ ಇಲ್ಲಿನ ಆಡಳಿತ ಸರ್ಕಾರಕ್ಕಿದೆಯೇ? ಎರಡೂ ದೇಶಗಳ ನಡುವಿನ ರಾಜಕೀಯ ಒತ್ತಡದಿಂದ ಒಪ್ಪಂದವನ್ನು ರದ್ದುಗೊಳಿಸುವ ಚರ್ಚೆಗಳು ಅನೇಕಬಾರಿ ಎದ್ದಿವೆ, ಆದರೆ ಜಾರಿಮಾಡಲಾಗಿಲ್ಲ.

ಕಾನೂನು ಮತ್ತು ರಾಜಕೀಯವಾಗಿ IWTಯ ಉಲ್ಲಂಘನೆ ಮಾಡುವುದು ಕೂಡಾ ಅಂತಾರಾಷ್ಟ್ರೀಯ ಖಂಡನೆಗೆ , ಕಾನೂನು ಉಲ್ಲಂಘನೆ, ಮತ್ತು ರಾಜಕೀಯ ಸಂಕ್ಷೋಭಕ್ಕೆ ಕಾರಣವಾಗಬಹುದು. ವಾಸ್ತವಿಕವಾಗಿ ಭಾರತವು ಸಂಪೂರ್ಣ ತಡೆಗಿಂತ, ಪೂರ್ವದ ನದಿಗಳ (ರಾವಿ, ಬಿಯಾಸ್, ಸಟ್ಲೆಜ್) ಬಳಕೆಯನ್ನು ಹೆಚ್ಚಿಸುವ ಅಥವಾ ಪಶ್ಚಿಮದ ನದಿಗಳಿಂದ ಒಪ್ಪಂದದ ಚೌಕಟ್ಟಿನೊಳಗೆ ಗರಿಷ್ಠ ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸುವ ಮೂಲಕ ಪಾಕಿಸ್ತಾನಕ್ಕೆ ಒತ್ತಡ ಹೇರಬಹುದು. ಆ ಮೂಲಕ ಸಿಂಧೂ ವ್ಯವಸ್ಥೆಯ ನೀರು ಪಾಕಿಸ್ತಾನಕ್ಕೆ ಕಮ್ಮಿ ಹರಿಯುವಂತೆ ಮಾಡಬಹುದಾದರೂ ಭಾರತ ನಿರೀಕ್ಷಿಸುವಷ್ಟು ಪೆಟ್ಟನ್ನು ಪಾಕಿಸ್ತಾನಕ್ಕೆ ಕೊಡಲಾಗುವುದಿಲ್ಲ. ಅಷ್ಟೇ ಅಲ್ಲದೆ ವಿಶ್ವ ಬ್ಯಾಂಕ್‌ನ ಪಾತ್ರವಿರುವುದರಿಂದ ಒಪ್ಪಂದವನ್ನು ಮೀರಿದರೆ ಭಾರತವು ಅಂತಾರಾಷ್ಟ್ರೀಯ ಒತ್ತಡವನ್ನು ಎದುರಿಸಬಹುದು. ಕೆಲವು ರಾಜಕೀಯ ನಾಯಕರು ಮತ್ತು ಗುಂಪುಗಳು, ವಿಶೇಷವಾಗಿ ಭಾರತ-ಪಾಕಿಸ್ತಾನ ಒತ್ತಡದ ಸಂದರ್ಭಗಳಲ್ಲಿ, ಒಪ್ಪಂದವನ್ನು ರದ್ದುಗೊಳಿಸಬೇಕೆಂದು ಸಲಹೆ ನೀಡುತ್ತಾರೆ, ಈ ಹಿಂದೆ ನೀಡಿದ್ದಾರೆ ಕೂಡ. ಆದರೆ, ಅವೆಲ್ಲಾ ವಾಸ್ತವಕ್ಕೆ ಮೀರಿದ ಹೇಳಿಕೆಗಳು. ಉದಾಹರಣೆಗೆ, 2016ರ ಉರಿ ದಾಳಿಯ ನಂತರ, ಪ್ರಧಾನಿ ನರೇಂದ್ರ ಮೋದಿಯವರು “ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” ಎಂದು ಹೇಳಿದ್ದರು, ಇದು ಒಪ್ಪಂದವನ್ನು ಪರಿಷ್ಕರಿಸುವ ಅಥವಾ ಮೀರುವ ಸಾಧ್ಯತೆಯನ್ನು ಸೂಚಿಸಿತ್ತು. ಆದರೆ, ಯಾವುದೇ ಔಪಚಾರಿಕ ಕ್ರಮ ಕೈಗೊಳ್ಳಲಾಗಿಲ್ಲ. ಚೀನಾ ಮೂಲಕ ಭಾರತಕ್ಕೆ ಹರಿಯುವ ಬ್ರಹ್ಮಪುತ್ರ ನದಿಯನ್ನು ಚೀನಾ ತಡೆಯುವ ಎಲ್ಲಾ ಸೂಚನೆಗಳನ್ನ ಕೊಟ್ಟಿತ್ತು. ಈಗ ಮತ್ತದೇ ಅನುಮಾನವು ಇದೆ. ಅಷ್ಟಲ್ಲದೆ ಭಾರತವು IWT ಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಸಂಪೂರ್ಣವಾಗಿ ಒಪ್ಪಂದವನ್ನೇ ತಿರಸ್ಕರಿಸುವ ಮೀರುವ ಯಾವ ಪ್ರಯತ್ನವು ಯಾವ ಕ್ರಮವೂ ಅಂದಿಗೂ ಆಗಿಲ್ಲ ಇಂದಿಗೂ ಆಗುತ್ತಿಲ್ಲ.

ನನ್ನ ಭಾರತ ಎಂಥ ದೇಶವೆಂದರೆ ತಾನಾಗೇ ಮತ್ತೊಂದು ದೇಶದ ಮೇಲೆ ಯುದ್ಧ ಮಾಡಿ, ಅಲ್ಲಿಯ ನಾಗರಿಕರಿಗೆ ತೊಂದರೆ ಕೊಟ್ಟು ರಕ್ತಹರಿಸಿ ತನ್ನ ದ್ವೇಷ ದಾಹ ತೀರಿಸಿಕೊಂಡ ಒಂದೇ ಒಂದು ಇತಿಹಾಸದ ಘಟನೆ ಇವತ್ತಿಗೂ ಇಲ್ಲ. ಅಖಂಡ ಭಾರತದ ಭಾಗವೇ ಆದ ಪಾಕಿಸ್ತಾನ ತನ್ನ ಕೆಟ್ಟ ಚಾಳಿಯನ್ನು ಬಿಡದೆ ಇದ್ದರೆ ಭವಿಷ್ಯದಲ್ಲಿ ಬೆಲೆ ತೆರಲೇಬೇಕಾಗುತ್ತದೆ (ಈಗಲೂ ಆಗಬಹುದು) ಪಾಕಿಸ್ತಾನ ಪಾಪಿಸ್ತಾನವಾಗಿದೆ. ಭಾರತದ ತಾಳ್ಮೆಯನ್ನು ಪದೇ ಪದೇ ಪರೀಕ್ಷಿಸುವ ಪಾಕ್ ಶಾಕ್ ಆಗೋದಂತೂ ಸತ್ಯ.

  • ಮೆಹಬೂಬ್. ಆರ್. ಕಲಾಲಬಂಡಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ